Index   ವಚನ - 46    Search  
 
ಕತ್ತಲೆ ಭೂತಳದ ವರ್ತಮಾನಕ್ಕೆ ಹೇಸಿ ಮನ ಓತು ಸುಚಿತ್ತ ನಿರ್ವಾಣದಾಸೋಹಮಂ ಕೈವಿಡಿದೆನಮ್ಮಾ ಎನ್ನ ತನುವೇ ವನಿತೆ ಕರಣಂಗಳೇ ದ್ರವ್ಯ ಉರವಣಿಸಿದ ಭಕ್ತಿ ಇಂತೀ ತ್ರಿವಿದ ಪದಾರ್ಥಗಳಂ ಹಿಡಿದು ಗಣಂಗಳ ಮುಂದೆ ಕರಪಾತ್ರೆಯೆಂಬ ಕಾಯಕಮಂ ಕಟ್ಟಿದೆ. ಎನ್ನ ಸಮಯಾಚಾರಕ್ಕೆ ಸ್ಮಶಾನ ಮಂಟಪದಲ್ಲಿ ಗುರುವ ತಡೆದೆ ಹೃದಯಮಂಟಪದಲ್ಲಿಹ ಜಂಗಮವ ತಡೆದೆ ಎನ್ನ ಸ್ವಯ ಕಾಯಕಮಂ ತಂದು ರೂಪು ಪದಾರ್ಥಗಳಂ ನಿರ್ಭಾವ ಪರಿಯಾಣದಲ್ಲಿ ಗಡಣಿಸಿ ಗುರುವಿನ ಮುಂದಿಕ್ಕಿದೆ. ರುಚಿ ಪದಾರ್ಥಂಗಳಂ ಸುಮನ ಪರಿಯಾಣದಲ್ಲಿ ಗಡಣಿಸಿ ಜಂಗಮದ ಮುಂದಿಕ್ಕಿದೆ. ತೃಪ್ತಿ ಪದಾರ್ಥಂಗಳಂ ಭಾವದ ಪರಿಯಾಣದಲ್ಲಿ ಗಡಣಿಸಿ ಲಿಂಗದ ಮುಂದಿಕ್ಕಿದೆ. ಇಂತೀ ನಿರಂಜನ ಗುರು ಲಿಂಗ ಜಂಗಮ ಸವಿದು ಒಕ್ಕು ಮಿಕ್ಕ ತ್ರಿವಿಧಪ್ರಸಾದವನುಂಡು ತ್ರಿವಿಧಕರ್ಮ ನಾಸ್ತಿಯಾಗಿ ನಾನು ಬದುಕಿದೆನಮ್ಮ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ.