Index   ವಚನ - 62    Search  
 
ಕಾಮಧೇನುವಿನಲ್ಲಿ ಕಲ್ಪಿಸಿದ ಸವಿಯಿಪ್ಪುದಲ್ಲದೆ ಮರ್ತ್ಯದ ಪಶುವಿನಲ್ಲಿ ಉಂಟೇನಯ್ಯ? ಮಹಾಶೇಷನಲ್ಲಿ ಮಾಣಿಕ್ಯ ಪ್ರಭಾವಿಸುತಿಪ್ಪುದಲ್ಲದೆ ಕೆರೆಯೊಳಗಣ ಒಳ್ಳೆಯೊಳಗುಂಟೇನಯ್ಯ? ವಾರಣದ ಕುಂಭಸ್ಥಲದಲ್ಲಿ ಮೌಕ್ತಿಕ ಬೆಳಗುತಿಪ್ಪುದಲ್ಲದೆ ಊರ ಹಂದಿಯಲ್ಲಿ ಉಂಟೇನಯ್ಯ? ಶರಣರ ಮನೋಮಧ್ಯದಲ್ಲಿ ಆ ಶಿವನು ಮೂರ್ತಿಗೊಂಡು ಆ ಶರಣರ ಜಿಹ್ವೆಯ ಕೊನೆಯ ಮೇಲೆ ವಚನವೆಂಬ ಪರಮಾಮೃತವ ಕರೆದು ಕೆಲಬಲದ ಗಣಂಗಳಿಗೆ ಸವಿದೋರಿ ಆ ಶರಣರಲ್ಲಿ ಪರಿಪೂರ್ಣನಾಗಿಪ್ಪನಲ್ಲದೆ ದ್ವೈತ ಅದ್ವೈತಗಳೆಂಬ ಮನೆ ಶುನಕ ಸೂಕರರಲ್ಲಿ ಉಂಟೇನಯ್ಯ? ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ.