Index   ವಚನ - 102    Search  
 
ಬಟ್ಟೆಗೊಂಡು ಹೋಗುತಿಪ್ಪ ಮನುಜನೊಬ್ಬ ಹುಲಿ ಕಾಡುಗಿಚ್ಚು ರಕ್ಕಸಿ ಕಾಡಾನೆಗಳು ನಾಲ್ಕೂ ದೆಸೆಯಲಟ್ಟುತ ಬರೆ ಕಂಡು ಭಯದಿಂದ ಹೋಗ ದೆಸೆಯಿಲ್ಲದೆ ಬಾವಿಯ ಕಂಡು ತಲೆಯನೂರಿ ಬೀಳುವಲ್ಲಿ ಹಾವ ಕಂಡು ಇಲಿಗಡಿದ ಬಳ್ಳಿಯ ಹಿಡಿದು ನಿಲೆ ಜೇನುಹುಳು ಮೈಯನೂರುವಾಗ ಮೂಗಿನ ತುದಿಯಲೊಂದು ಹನಿ ಮಧು ಬಂದು ಬೀಳೆ ಆ ಮಧುವ ಕಂಡು ಹಿರಿದಪ್ಪ ದುಃಖವೆಲ್ಲವೆಲ್ಲವ ಸೈರಿಸಿ ನಾಲಗೆಯ ತುದಿಯಲ್ಲಿ ಆ ಮಧುವ ಸೇವಿಸುವಂತೆ ಈ ಸಂಸಾರಸುಖ ವಿಚಾರಿಸಿ ನೋಡಿದಡೆ ದುಃಖದಾಗರ ಇದನರಿದು ಸಕಲ ವಿಷಯಂಗಳಲ್ಲಿ ಸುಖವಿಂತುಟೆಂದು ನಿರ್ವಿಷಯನಾಗಿ ನಿಂದ ನಿಲವು ನೀನೇ, ಸಿಮ್ಮಲಿಗೆಯ ಚೆನ್ನರಾಮಾ.