Index   ವಚನ - 325    Search  
 
ಗುರುಕಾರುಣ್ಯ, ಲಿಂಗನಿಷ್ಠೆ, ಪ್ರಸಾದವಿಶ್ವಾಸ, ಭಾವದ ನಿಜವನಾರು ಬಲ್ಲರಯ್ಯಾ? ಗುರುವಿನಲ್ಲಿ ಲಿಂಗಪ್ರವೇಶ, ಲಿಂಗದಲ್ಲಿ ಜಂಗಮಪ್ರವೇಶ, ಜಂಗಮದಲ್ಲಿ ಪ್ರಸಾದಪ್ರವೇಶ, ಪ್ರಸಾದದಲ್ಲಿ ಪರಿಣಾಮಪ್ರವೇಶ, ಪರಿಣಾಮದಲ್ಲಿ ಭಾವಪ್ರವೇಶ. ಇಂತು ಗುರುವಿಂಗೆ ಲಿಂಗವಿಲ್ಲ, ಲಿಂಗಕ್ಕೆ ಜಂಗಮವಿಲ್ಲ, ಜಂಗಮಕ್ಕೆ ಪ್ರಸಾದವಿಲ್ಲ, ಪ್ರಸಾದಕ್ಕೆ ಪರಿಣಾಮವಿಲ್ಲ, ಪರಿಣಾಮಕ್ಕೆ ಭಾವವಿಲ್ಲ. ಇದರಾಗು ಹೋಗಿನ ಸಕೀಲಸಂಬಂಧವ ಕೂಡಲಚೆನ್ನಸಂಗಾ ನಿಮ್ಮ ಶರಣನೆ ಬಲ್ಲ.