Index   ವಚನ - 398    Search  
 
ಅಂಗದ ಮೇಲೆ ಲಿಂಗಸಾಹಿತ್ಯವಾಗದಿದ್ದರೇನು, ಕಾಯವೇನು ಬರಿ ಕಾಯವೇ? ಪ್ರಾಣದ ಮೇಲೆ ಲಿಂಗಸಾಹಿತ್ಯವಾಗದಿದ್ದರೇನು? ಪ್ರಾಣವೇನು ವಾಯುಪ್ರಾಣವೆ? ಅಹಂಗಲ್ಲ, ನಿಲ್ಲು. "ಗೌರವಂ ಕಾಯಸಂಬಂಧಂ ಪ್ರಾಣಸ್ತು ಪ್ರಾಣಸಂಯುತಃ| ಕಾರಣಂ ಭಾವಸಂಬಂಧಂ ಗುರೋಃ ಶಿಷ್ಯಮನುಗ್ರಹಮ್"|| ಎಂದುದಾಗಿ ಹರರೂಪಾಗಿದ್ದುದೆ ಪ್ರಾಣಲಿಂಗ, ಗುರುರೂಪಾಗಿದ್ದುದೆ ಜಂಗಮಲಿಂಗ. ಹರರೂಪಾಗಿರ್ದ ಪ್ರಾಣಲಿಂಗವಾವ ಕೈಯಲುಂಬುದೆಂದರೆ, ಭಕ್ತನ ಜಿಹ್ವಾಗ್ರದಲುಂಬುದು. ಗುರುರೂಪಾಗಿರ್ದ ಜಂಗಮಲಿಂಗವಾವ ಕೈಯಲುಂಬುದೆಂದರೆ, ಜಂಗಮ ಜಿಹ್ವಾಗ್ರದಲುಂಬುದು. ಇದು ಕಾರಣ ಹರರೂಪಾಗಿದ್ದುದೆ ಪ್ರಾಣಲಿಂಗ, ಗುರುರೂಪಾಗಿದ್ದುದೆ ಜಂಗಮಲಿಂಗ. "ಸ್ಥಾವರಂ ಜಂಗಮಶ್ಚೈವ ದ್ವಿವಿಧಂ ಲಿಂಗಮುಚ್ಯತೇ| ಜಂಗಮಸ್ಯಾವಮಾನೇನ ಸ್ಥಾವರಂ ನಿಷ್ಫಲಂ ಭವೇತ್"|| ಎಂಬ ವಚನವನರಿದು ಸ್ಥಾವರವನು ಜಂಗಮವನು ಒಂದೆಂದರಿದೆನಯ್ಯಾ ಕೂಡಲಚೆನ್ನಸಂಗಮದೇವಾ.