Index   ವಚನ - 743    Search  
 
ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗವೆಂದಿಂತು ಲಿಂಗಸ್ಥಲವಾರಕ್ಕಂ ವಿವರ: ಆಚಾರಲಿಂಗಸ್ಥಲ ತ್ರಿವಿಧ: ಸದಾಚಾರ, ನಿಯತಾಚಾರ, ಗಣಾಚಾರ. ಇದಕ್ಕೆ ವಿವರ: ಎಲ್ಲ ಜನವಹುದೆಂಬುದೆ ಸದಾಚಾರ. ಹಿಡಿದ ವ್ರತನಿಯಮವ ಬಿಡದಿಹುದೆ ನಿಯತಾಚಾರ. ಶಿವನಿಂದೆಯ ಕೇಳದಿಹುದೆ ಗಣಾಚಾರ. ಗುರುಲಿಂಗಸ್ಥಲ ತ್ರಿವಿಧ: ದೀಕ್ಷೆ, ಶಿಕ್ಷೆ, ಸ್ವಾನುಭಾವ. ಇದಕ್ಕೆ ವಿವರ: ದೀಕ್ಷೆಯೆಂದಡೆ ಗುರು, ಶಿಕ್ಷೆಯೆಂದಡೆ ಜಂಗಮ, ಸ್ವಾನುಭಾವವೆಂದಡೆ ತನ್ನಿಂದ ತಾನರಿವುದು. ಶಿವಲಿಂಗಸ್ಥಲ ತ್ರಿವಿಧ: ಇಷ್ಟಲಿಂಗ, ಪ್ರಾಣಲಿಂಗ, ತೃಪ್ತಿಲಿಂಗ. ಇದಕ್ಕೆ ವಿವರ: ಶ್ರೀಗುರು ಕರಸ್ಥಲದಲ್ಲಿ ಅನುಗ್ರಹವ ಮಾಡಿಕೊಟ್ಟುದೀಗ ಇಷ್ಟಲಿಂಗ, ತನುಗುಣ ನಾಸ್ತಿಯಾದುದೇ ಪ್ರಾಣಲಿಂಗ, ಜಾಗ್ರಸ್ವಪ್ನಸುಷುಪ್ತಿಯಲ್ಲಿ ಲಿಂಗವಲ್ಲದೆ ಪೆರತೊಂದನರಿಯದಿಪ್ಪುದೆ ತೃಪ್ತಿಲಿಂಗ. ಜಂಗಮಲಿಂಗಸ್ಥಲ ತ್ರಿವಿಧ: ಸ್ವಯ, ಚರ, ಪರ. ಇದಕ್ಕೆ ವಿವರ: ಸ್ವಯವೆಂದಡೆ ತಾನು. ಚರವೆಂದಡೆ ಲಾಂಛನ ಮುಂತಾಗಿ ಚರಿಸುವುದು. ಪರವೆಂದಡೆ ಅರಿವು ಮುಂತಾಗಿ ಚರಿಸುವುದು. ಪ್ರಸಾದಲಿಂಗಸ್ಥಲ ತ್ರಿವಿಧ: ಶುದ್ಧ, ಸಿದ್ಧ, ಪ್ರಸಿದ್ಧ ಇದಕ್ಕೆ ವಿವರ: ಶುದ್ಧವೆಂದಡೆ ಗುರುಮುಖದಿಂದ ಮಲತ್ರಯವ ಕಳೆದುಳಿದ ಶೇಷ, ಸಿದ್ಧವೆಂದಡೆ ಲಿಂಗಮುಖದಿಂದ ಕರಣಮಥನಂಗಳ ಕಳೆದುಳಿದ ಶೇಷ. ಪ್ರಸಿದ್ಧವೆಂದಡೆ ಜಂಗಮಮುಖದಿಂದ ಸರ್ವಚೈತನ್ಯಾತ್ಮಕ ತಾನೆಯಾಗಿ ಖಂಡಿತವಳಿದುಳಿದ ಶೇಷ. ಮಹಾಲಿಂಗಸ್ಥಲ ತ್ರಿವಿಧ: ಪಿಂಡಜ, ಅಂಡಜ, ಬಿಂದುಜ. ಇದಕ್ಕೆ ವಿವರ: ಪಿಂಡಜವೆಂದಡೆ ಘಟಾಕಾಶ. ಅಂಡಜವೆಂದಡೆ ಬ್ರಹ್ಮಾಂಡ. ಬಿಂದುಜವೆಂದಡೆ ಮಹಾಕಾಶ. ಇಂತು ಲಿಂಗಸ್ಥಲ ಅರಕ್ಕಂ ಹದಿನೆಂಟು ಸ್ಥಲವಾಯಿತ್ತು. ಇನ್ನು ಅಂಗಸ್ಥಲವಾವುವೆಂದಡೆ: ಭಕ್ತ, ಮಾಹೇಶ್ವರ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯ. ಇನ್ನು ಅಂಗಸ್ಥಲವಾರಕ್ಕೆ ವಿವರ: ಭಕ್ತಸ್ಥಲ ತ್ರಿವಿಧ: ಗುರುಭಕ್ತ, ಲಿಂಗಭಕ್ತ, ಜಂಗಮಭಕ್ತ. ತನುಕ್ರೀಯಿಂದ ತನುಮನಧನವನರ್ಪಿಸುವನಾಗಿ ಗುರುಭಕ್ತ. ಮನಕ್ರೀಯಿಂದ ಮನತನುಧನವನರ್ಪಿಸುವನಾಗಿ ಲಿಂಗಭಕ್ತ. ಧನಕ್ರೀಯಿಂದ ಧನಮನತನುವನರ್ಪಿಸುವನಾಗಿ ಜಂಗಮಭಕ್ತ. ಮಾಹೇಶ್ವರಸ್ಥಲ ತ್ರಿವಿಧ: ಇಹಲೋಕವೀರ, ಪರಲೋಕವೀರ, ಲಿಂಗವೀರ. ಅದಕ್ಕೆ ವಿವರ: ಮರ್ತ್ಯಲೋಕದ ಮಹಾಗಣಂಗಳು ಮೆಚ್ಚುವಂತೆ, ಷಡ್ದರ್ಶನಂಗಳ ನಿರಸನವ ಮಾಡಿ, ತನ್ನ ಸಮಯಕ್ಕೆ ಪ್ರಾಣವ ವೆಚ್ಚಿಸುವನಾಗಿ ಇಹಲೋಕವೀರ. ದೇವಲೋಕದ ದೇವಗಣಂಗಳು ಮೆಚ್ಚುವಂತೆ, ಸರ್ವಸಂಗಪರಿತ್ಯಾಗವ ಮಾಡಿ ಚತುರ್ವಿಧಪದಂಗಳ ಧರ್ಮಾರ್ಥಕಾಮಮೋಕ್ಷಂಗಳ ಬಿಟ್ಟಿಹನಾಗಿ ಪರಲೋಕವೀರ. ಅಂಗಲಿಂಗಸಂಗದಿಂದ ಸರ್ವಕರಣಂಗಳು ಸನ್ನಹಿತವಾಗಿಪ್ಪನಾಗಿ ಲಿಂಗವೀರ. ಪ್ರಸಾದಿಸ್ಥಲ ತ್ರಿವಿಧ: ಅರ್ಪಿತಪ್ರಸಾದಿ, ಅವಧಾನಪ್ರಸಾದಿ, ಪರಿಣಾಮಪ್ರಸಾದಿ ಅದಕ್ಕೆ ವಿವರ: ಕಾಯದ ಕೈಯಲ್ಲಿ ಸಕಲಪದಾರ್ಥಂಗಳು ಇಷ್ಟಲಿಂಗಕ್ಕೆ ಕೊಟ್ಟು ಕೊಂಬನಾಗಿ ಅರ್ಪಿತಪ್ರಸಾದಿ. ಪಂಚೇಂದ್ರಿಯಂಗಳಲ್ಲಿ ಪಂಚಲಿಂಗಪ್ರತಿಷ್ಠೆಯ ಮಾಡಿ, ಅಲ್ಲಲ್ಲಿ ಬಂದ ಸುಖವನಲ್ಲಲ್ಲಿ ಮನದ ಕೈಯಲ್ಲಿ ಕೊಟ್ಟು ಕೊಂಬನಾಗಿ ಅವಧಾನಪ್ರಸಾದಿ. ಅಂಗಾಶ್ರಯವಳಿದು ಲಿಂಗಾಶ್ರಯವುಳಿದು, ಭಾವಭರಿತನಾಗಿಪ್ಪನಾಗಿ ಪರಿಣಾಮಪ್ರಸಾದಿ. ಪ್ರಾಣಲಿಂಗಿಸ್ಥಲ ತ್ರಿವಿಧ: ಆಚಾರಪ್ರಾಣಿ, ಲಿಂಗಪ್ರಾಣ, ಜಂಗಮಪ್ರಾಣಿ. ಅದಕ್ಕೆ ವಿವರ: ಮನೋವಾಕ್ಕಾಯದಲ್ಲಿ ಆಚಾರವ ಅವಗ್ರಹಿಸಿಹನಾಗಿ ಆಚಾರಪ್ರಾಣಿ. ಬಾಹ್ಯೋಪಚಾರಂಗಳ ಮರೆದು ಲಿಂಗಕ್ಕೆ ತನ್ನ ಪ್ರಾಣವನೆ ಪೂಜೆಯ ಮಾಡುವನಾಗಿ ಲಿಂಗಪ್ರಾಣಿ. ಬಾಹ್ಯಭಕ್ತಿಯ ಮರೆದು ಜಂಗಮಕ್ಕೆ ತನ್ನ ತನುಮನಪ್ರಾಣಂಗಳ ನಿವೇದಿಸುವನಾಗಿ ಜಂಗಮಪ್ರಾಣಿ ಶರಣಸ್ಥಲ ತ್ರಿವಿಧ: ಇಷ್ಟಲಿಂಗಾರ್ಚಕ, ಪ್ರಾಣಲಿಂಗಾರ್ಚಕ, ತೃಪ್ತಿಲಿಂಗಾರ್ಚಕ ಅದಕ್ಕೆ ವಿವರ: ಅನಿಷ್ಟ ನಷ್ಟವಾಯಿತ್ತಾಗಿ ಇಷ್ಟಲಿಂಗಾರ್ಚಕ. ಸ್ವಯಪರವನರಿಯನಾಗಿ ಪ್ರಾಣಲಿಂಗಾರ್ಚಕ. ಇಹಪರವನರಿಯನಾಗಿ ತೃಪ್ತಿಲಿಂಗಾರ್ಚಕ. ಐಕ್ಯಸ್ಥಲ ತ್ರಿವಿಧ: ಕಾಯಲಿಂಗೈಕ್ಯ, ಜೀವಲಿಂಗೈಕ್ಯ, ಭಾವಲಿಂಗೈಕ್ಯ. ಅದಕ್ಕೆ ವಿವರ: ಕ್ರಿಯೆಯರತುದೆ ಕಾಯಲಿಂಗೈಕ್ಯ. ಅನುಭಾವವರತುದೆ ಜೀವಲಿಂಗೈಕ್ಯ. ಅರಿವು ಸಿನೆ ಬಂಜೆಯಾದುದೆ ಭಾವಲಿಂಗೈಕ್ಯ. ಇಂತೀ ಅಂಗಸ್ಥಲ ಅರಕ್ಕಂ ಹದಿನೆಂಟು ಸ್ಥಲವಾಯಿತ್ತು. ಉಭಯಸ್ಥಲ ಮೂವತ್ತಾರರೊಳಗಾದ ಸರ್ವಾಚಾರಸಂಪತ್ತನು ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣನೆ ಬಲ್ಲ.