Index   ವಚನ - 1122    Search  
 
ಕಲ್ಲದೇವರ ಪೂಜೆಯ ಮಾಡಿ ಕಲಿಯುಗದ ಕತ್ತೆಗಳಾಗಿ ಹುಟ್ಟಿದರಯ್ಯಾ. ಮಣ್ಣದೇವರ ಪೂಜೆಯ ಮಾಡಿ ಮಣ್ಣಾಗಿ ಹುಟ್ಟಿದರಯ್ಯಾ. ಮರನದೇವರ ಪೂಜೆಯ ಮಾಡಿ ಎಗ್ಗಗಳಾದರಯ್ಯ. ಜಂಗಮದೇವರ ಪೂಜೆಯ ಮಾಡಿ ಪ್ರಾಣಲಿಂಗಿ ಪ್ರಸಾದಿಗಳಾದರಯ್ಯ. ಅದೆಂತೆಂದಡೆ: ಜಂಗಮದೇವರು ನಡೆಸಿದರೆ ನಡೆವರು, ನುಡಿಸಿದರೆ ನುಡಿವರು, ಒಡನೆ ಮಾತಾಡುವರು, ತಪ್ಪಿದರೆ ಬುದ್ಧಿಯ ಹೇಳುವರು. ಜಂಗಮದೇವರ ಪೂಜೆಯ ಮಾಡಿ ಕೈಲಾಸಕ್ಕೆ ಯೋಗ್ಯರಾದರಯ್ಯಾ. ಕೂಡಲಚೆನ್ನಸಂಗಮದೇವಯ್ಯಾ.