ಪೃಥ್ವಿಯ ಮೇಲಣ ಕಣಿಯ ತಂದು,
ಪೂಜಾವಿಧಾನಕ್ಕೊಳಗಾದ
ಅಷ್ಟತನುವಿನ ಕೈಯಲ್ಲಿ ಕೊಟ್ಟು
ಮುಟ್ಟಿ ಪೂಜಿಸಬೇಕೆಂಬರು.
ಮೂವರಿಗೆ ಹುಟ್ಟಿದಾತನನೆಂತು ಪೂಜಿಸುವಿರೊ?
ಭೂಮಿಗೆ ಹುಟ್ಟಿ ಶಿಲೆಯಾಯಿತ್ತು
ಕಲ್ಲು ಕುಟ್ಟಿಗ ಮುಟ್ಟಿ ರೂಪಾಯಿತ್ತು.
ಗುರು ಮುಟ್ಟಿ ಲಿಂಗವಾಯಿತ್ತು.
ಇದು ಬಿದ್ದಿತ್ತೆಂದು ಸಮಾಧಿಯ
ಹೊಕ್ಕೆವೆಂಬರು ಎತ್ತಿಕೊಂಡು
ಅಷ್ಟವಿಧಾರ್ಚನೆ ಷೋಡಶೋಪಚಾರವ
ಮಾಡುವುದೆ ವ್ರತವು.
ಕಟ್ಟುವ ಠಾವನು ಮುಟ್ಟುವ ಭೇದವನು
ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣನೆ ಬಲ್ಲ.