ಪ್ರಥಮ ಕಾಲದಲ್ಲಿ ನಿರಾಲಂಬಿಯಾಗಿರ್ದಿರಯ್ಯಾ.
ದ್ವಿತೀಯ ಕಾಲದಲ್ಲಿ ತೇಜೋಮೂರ್ತಿಯಾಗಿದ್ದಿರಯ್ಯಾ.
ತೃತೀಯ ಕಾಲದಲ್ಲಿ ನಾದಮೂರ್ತಿಯಾಗಿರ್ದಿರಯ್ಯಾ.
ಚತುರ್ಥ ಕಾಲದಲ್ಲಿ ಚೈತನ್ಯರೂಪ ತಾಳಿರ್ದಿರಯ್ಯಾ.
ಪಂಚಮ ಕಾಲದಲ್ಲಿ ಧರ್ಮಮೂರ್ತಿಯಾಗಿರ್ದಿರಯ್ಯಾ.
ಷಷ್ಠಮ ಕಾಲದಲ್ಲಿ ಪರಮಪುರುಷಾರ್ಥಸಾಧನವಾಗಿ,
ತ್ರಿವಿಧಭಕ್ತಿಗೆ ನೀವೇ ಕಾರಣವಾಗಿ ಬಂದಿರಿ ಪ್ರಮಥರು ಸಹಿತ,
ಮುಟ್ಟಿ ಪ್ರಾಣಲಿಂಗದ ಹರಿವ ತೋರಿಸಬೇಕೆಂಬ ನಿಮಿತ್ತ.
ಬೆಸನವಿಡಿದು ನಿಮ್ಮ ಕರುಣದ ಶಿಶುವಾಗಿ ಹುಟ್ಟಿದೆ ನಿಮ್ಮ ಕರಸ್ಥಲದಲ್ಲಿ
ಕೂಡಲಚೆನ್ನಸಂಗಮದೇವಾ,
ನಿಮ್ಮ ಮಹಿಮೆಗೆ ನಮೋ ನಮೋ ಎನುತಿರ್ದೆನು.