Index   ವಚನ - 1482    Search  
 
ಭಿನ್ನಪ್ರಾಣವಳಿದು ನಿರ್ಮಳಚಿತ್ತವ ಮಾಡಿ ಕಣ್ಣಾಲಿ ಉರೆ ನಟ್ಟು ಹೊರಸೂಸದೆ, ಕಣ್ಣ ಬಣ್ಣವ ಕಳೆದು, ಉಣ್ಣನು ಉಣ್ಣದೆ ಇರನು, ತನ್ನ ನಿಲವನರಿತು ತಾನೊಬ್ಬನೆ ಇರನು. ಜನ್ಮ ಮೃತ್ಯುಗಳಲ್ಲಿ ಕಾಳು ಬೆಳುದಿಂಗಳಲ್ಲಿ, ತನ್ನ ಪ್ರಾಣ ತನಗೆ ಪ್ರಕಾಶವು. ತನ್ನೊಳಗೆ ಹೊಣಿ ಹೊಕ್ಕು, ಕುಂಬಳದ ಸೂಚಿಯ ಸುಮ್ಮಾನಿ ಶರಣನ ನಿಲವ ನೋಡಾ! ಅಳಲಲಿಲ್ಲ ಬಳಲಲಿಲ್ಲ ಅಳಿಯಲಿಲ್ಲ ಉಳಿಯಲಿಲ್ಲ, ಎರಡಳಿದ ನಿಲವು. ಉಭಯ ಮಧ್ಯದ ಕೊರಡಿಂಗೆ ಕುಂಟಿಯನಿಕ್ಕಿ ಕೆಡಿಸುವನು ತಾನಲ್ಲ. ಹೊರಳಲರಿಯನು ಕೊಳಚಿಯ ಉದಕದೊಳಗೆ. ಕಳಾಕಳಾ ಭೇದದಿಂದ ತೊಳತೊಳಗುವನು. ದಳಭ್ರೂಮಧ್ಯದ ಧ್ರುವಮಂಡಲವ ಮೀರಿ ಕಳೆದು ದಾಂಟಿ ಕೂಡಲಚೆನ್ನಸಂಗಯ್ಯನೊಳಗೆ ಶರಣಕಾಂತಿಯ ನಿಲವಿಂಗೆ ಶರಣು ಶರಣು.