Index   ವಚನ - 1528    Search  
 
ಮುಕ್ತಿಯೆಂದು ಮನದಲ್ಲಿ ಹೊಳೆದು ಕಾಮಿಸುವನ್ನಕ್ಕ ಪ್ರಸಾದಸಾಹಿತ್ಯವಾಗದು. ಪರವೆಂದು ಮನದಲ್ಲಿ ಹೊಳೆದು ಕಾಮಿಸುವನ್ನಕ್ಕ ಜಂಗಮಸಾಹಿತ್ಯವಾಗದು. ಲಿಂಗವ ಬೆರಸಿಹೆನೆಂದು ಮನದಲ್ಲಿ ಹೊಳೆದು ಕಾಮಿಸುವನ್ನಕ್ಕ ಶಿವಲಿಂಗಸಾಹಿತ್ಯವಾಗದು. ವಿಶೇಷ ತತ್ತ್ವ ಉಂಟೆಂದು ಮನದಲ್ಲಿ ಹೊಳೆದು ಕಾಮಿಸುವನ್ನಕ್ಕ ಶ್ರೀಗುರುಸಾಹಿತ್ಯವಾಗದು. ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ- ಇಂತೀ ಚದುರ್ವಿಧಲಿಂಗ ಏಕೀಕರಿಸಿ, ಪ್ರಾಣಲಿಂಗವಾದ ಮಹಾಮಹಿಮಂಗೆ ಕಾಮಿಸಲಿಲ್ಲ, ಕಲ್ಪಿಸಲಿಲ್ಲ, ಭಾವಿಸಲಿಲ್ಲ ಚಿಂತಿಸಲಿಲ್ಲ. ಆತ ನಿಶ್ಚಿಂತ ಪರಮಸುಖಿ, ಆತನಿರ್ದುದೆ ಕೈಲಾಸ, ಕೂಡಲಚೆನ್ನಸಂಗಮದೇವಾ.