Index   ವಚನ - 1689    Search  
 
ಸತ್ಯಕಾಯಕ ಸತ್ಯಕಾಯಕವೆಂದು ನುಡಿವಿರಿ, ಸತ್ಯಕಾಯಕವಾವುದೆಂದರಿಯಿರಿ ಭಕ್ತಗೃಹಂಗಳಿಗೆ ಭೃತ್ಯಕಾಯಕವನೊಡಗೊಂಡು ಹೋಗಿ ಆ ಭಕ್ತರಿಗೆ ತಾನು ಭೃತ್ಯನಾಗಿ ಶರಣೆಂದು, ತನ್ನ ಕಾಯಕವನೊಪ್ಪಿಸಿ ಪದಾರ್ಥಂಗಳನು ಪಡೆವಲ್ಲಿ ಭಕ್ತಿ ಬಂಧನವಿಲ್ಲದೆ, ಆ ಭಕ್ತನ ಮನವ ನೋಯಿಸದೆ, ಭಕ್ತಿಮಹೋತ್ಸಾಹದಿಂದ ಬಂದ ಪದಾರ್ಥಂಗಳನು ತಂದು ಲಿಂಗಜಂಗಮಕ್ಕೆ ನೀಡಿ, ಅವರೊಕ್ಕುದ ಕೊಂಡಿಪ್ಪುದೆ ಸತ್ಯಕಾಯಕ, ಆತನೆ ಸದ್ಭಕ್ತ. ಇನಿತಲ್ಲದೆ ಲಿಂಗಜಂಗಮಕ್ಕೆ ಸಲುವುದೆಂದು ಭಕ್ತನ ಬಂಧನಕಿಕ್ಕಿ ಭಕ್ತಿಯ ಮನೋತ್ಸಾಹಗುಂದಿಸಿ, ಅಸುರಕರ್ಮದಿಂದ ತಂದ ದ್ರವ್ಯಂಗಳೆಲ್ಲವು ಅಸ್ಥಿ ಮಾಂಸ ಚರ್ಮಂಗಳೆನಿಸುವುದಲ್ಲದೆ ಅವು ಪದಾರ್ಥಂಗಳಲ್ಲ. ಅದು ಲಿಂಗಜಂಗಮಕ್ಕೆ ಸಲ್ಲದು, ಅವಂಗೆ ಪ್ರಸಾದವಿಲ್ಲ. ಅದು ಸತ್ಯಕಾಯಕಕ್ಕೆ ಸಲ್ಲದು. ಅವ ರಾಕ್ಷಸನಪ್ಪನಲ್ಲದೆ ಭಕ್ತನಲ್ಲ. ಅವನ ಮನೆಯ ಹೊಕ್ಕು ಲಿಂಗಾರ್ಚನೆಯ ಮಾಡುವಾತ ಜಂಗಮಸ್ಥಲಕ್ಕೆ ಸಲ್ಲ. ಅವರೀರ್ವರನು ಕೂಡಲಚೆನ್ನಸಂಗಯ್ಯ ಇಪ್ಪತ್ತೆಂಟುಕೋಟಿ ನಾಯಕನರಕದಲ್ಲಿಕ್ಕುವ.