Index   ವಚನ - 1693    Search  
 
ಸತ್ವ ರಜ ತಮವೆಂಬವು ಪ್ರಪಂಚುವೆಂದೆಂಬಿರಿ; ಸತ್ವವೆ ಪರತತ್ತ್ವ ಕಾರಣ, ಒಂದೆರಡೆಣಿಕೆಯ ಉದಯಾಸ್ತಮಾನವುಂಟೆ ಆತ್ಮವಿತ್ತುವಿಂಗೆ? ಉದಕವನುಂಡ ಲೋಹದ ಪರಿಯಂತೆ ಇರಬೇಕು, ಮೂಗ ಕಂಡ ಕನಸ ನೀವು ಬಲ್ಲಡೆ ಹೇಳಿರೆ! ಉಪಾಧಿಯಿಲ್ಲದುಪಮೆ, ಭಾವವಿಲ್ಲದ ಭರಿತ, ಇಂದ್ರಿಯವರತ ಪ್ರಕಾಶ ನೋಡಿರೆ! ಕಾರಣವಿಲ್ಲದ ಕಾರ್ಯ, ಕೇಳಲಿಲ್ಲದ ಉಲುಹು, ಬೇಡಲಿಲ್ಲದ ಪದವಿದು. ತೋರಿ, ಆದಿ ಅಂತ್ಯವಿಲ್ಲದ, ತ್ಯಪ್ತಿಯಡಗಿದ ನಿಜಕ್ಕೆ ನಾನು ನೀನೆಂಬೊಂದು ಪ್ರತಿಯುಂಟೆ? ನಿಜಭಾವವಳಿದಾತ್ಮ ನಿತ್ಯವೆಂಬುದನು ಎಲ್ಲ ಶ್ರುತಿಗಳಲ್ಲಿ ಕೇಳಿಕೊಳ್ಳಿ. ಸುಖದ ಸೋಕಿನ ಪರಿಣಾಮದ ಪದವನು ಕೂಡಲಚೆನ್ನಸಂಗಯ್ಯನಲ್ಲಿ ಪ್ರಭುವೆ ಬಲ್ಲ.