ಸೃಷ್ಟಿಯ ಮೇಲಣ ಕಣಿಯ ತಂದು,
ಅಷ್ಟತನುವಿನ ಕೈಯಲ್ಲಿ ಕೊಟ್ಟು
ಪೂಜಿಸು ಪೂಜಿಸು ಎಂಬರಯ್ಯಾ.
ನಾಲ್ವರಿಗೆ ಹುಟ್ಟಿದ ಲಿಂಗವ ನಾನೆತ್ತ ಪೂಜಿಸುವೆನಯ್ಯಾ.
ಪೃಥ್ವಿಗೆ ಹುಟ್ಟಿ ಶಿಲೆಯಾಯಿತ್ತು,
ಕಲ್ಲುಕುಟಿಗನ ಕೈಯಲ್ಲಿ ರೂಪಾಯಿತ್ತು.
ಗುರುವಿನ ಹಸ್ತದಲ್ಲಿ ಮೂರ್ತಿಯಾಯಿತ್ತು,
ಉಪಚಾರಕ್ಕೆ ದೇವರಾಯಿತ್ತು.
ಈ ನಾಲ್ವರಿಗೆ ಹುಟ್ಟಿದ ಲಿಂಗವ ನಾನೆತ್ತ ಪೂಜಿಸುವೆನಯ್ಯಾ.
ಈ ಲಿಂಗ ನೆಲಕ್ಕೆ ಬಿದ್ದರೆ ಸಮಾಧಿಯ ಹೊಕ್ಕೇನೆಂಬರು.
'ಸಮಾಧಿ ಶಸ್ತ್ರಂ ಚ ಶಿಲಾದಾನಾದಿಂ ಚ'
ಈ ಆರು ತೆರದಲ್ಲಿ ಸತ್ತನಾದರೆ
ಕುಂಭೀಪಾತಕ ನಾಯಕನರಕ ತಪ್ಪದು
ಕೂಡಲಚೆನ್ನಸಂಗಮದೇವಾ.