ಆನೆ ಮೊದಲು ಇರುವೆ ಕಡೆ ಎಂಬತ್ತುನಾಲ್ಕುಲಕ್ಷ ಜೀವರಾಶಿಯಲ್ಲಿ
ಸತ್ತು ಹುಟ್ಟಿ ಮಾಡಿದ ಪಾಪಂಗಳಿಗೆ ಕಡೆ ಇಲ್ಲವು ನೋಡಾ !
ಒಬ್ಬ ಶಿವನ ಅಂಗವ ಕಂಡೆನಾಗಿ ಹರಿದುಹೋಹವು ನೋಡಾ !
ಆ ಶಿವನ ತನು ಮನದ ಕೊನೆಯಲ್ಲಿ
ನಿರಾಲಂಬಲಿಂಗವಿಪ್ಪದು ನೋಡಾ !
ಆ ಲಿಂಗವು ಒಂದೇ ಮೂರುತೆರನಾಯಿತ್ತು.
ಅದು ಹೇಗೆಂದಡೆ :
ಗುರು-ಲಿಂಗ-ಜಂಗಮವೆಂದು ಮೂರುತೆರನಾಯಿತ್ತು.
ಈ ಮೂರು ಒಂದೊಂದು ಎರಡೆರಡಾಗಿ ಆರುತೆರನಾಯಿತ್ತು.
ಅದು ಹೇಗೆಂದಡೆ :
ಗುರುವಿಡಿದು ಭಕ್ತ-ಮಹೇಶ್ವರನೆಂದು ಎರಡುತೆರನಾಯಿತ್ತು.
ಲಿಂಗವಿಡಿದು ಪ್ರಸಾದಿ-ಪ್ರಾಣಲಿಂಗಿಯೆಂದು ಎರಡುತೆರನಾಯಿತ್ತು.
ಜಂಗಮವಿಡಿದು ಶರಣ-ಐಕ್ಯನೆಂದು ಎರಡುತೆರನಾಯಿತ್ತು.
ಹೀಂಗೆ ಮೂರು ಆರುತೆರನಾಯಿತ್ತು.
ಅದು ಹೇಗೆಂದಡೆ;
ಇಷ್ಟ-ಪ್ರಾಣ-ಭಾವವೆಂದು ಮೂರುತೆರನಾಯಿತ್ತು.
ಈ ಮೂರು ಒಂದೊಂದಾಗಿ ಎರಡೆರಡಾಗಿ ಆರುತೆರನಾಯಿತ್ತು.
ಅದು ಹೇಗೆಂದಡೆ;
ಇಷ್ಟಲಿಂಗವಿಡಿದು ಆಚಾರಲಿಂಗ-ಗುರುಲಿಂಗವೆಂದು
ಎರಡುತೆರನಾಯಿತ್ತು.
ಪ್ರಾಣಲಿಂಗವಿಡಿದು ಶಿವಲಿಂಗ-ಜಂಗಮಲಿಂಗವೆಂದು
ಎರಡುತೆರನಾಯಿತ್ತು.
ಭಾವಲಿಂಗವಿಡಿದು ಪ್ರಸಾದಲಿಂಗ-ಮಹಾಲಿಂಗವೆಂದು
ಎರಡುತೆರನಾಯಿತ್ತು.
ಹೀಂಗೆ ಮೂರು ಆರುತೆರನಾಯಿತ್ತು.
ಅದು ಹೇಗೆಂದಡೆ:
ಧ್ಯಾನ ಧಾರಣ ಸಮಾಧಿಯೆಂದು ಮೂರುತೆರನಾಯಿತ್ತು.
ಈ ಮೂರನೊಂದೊಂದು ಎರಡೆರಡಾಗಿ ಆರುತೆರನಾಯಿತ್ತು.
ಅದು ಹೇಗೆಂದಡೆ;
ಧ್ಯಾನವಿಡಿದು ಕ್ರಿಯಾಶಕ್ತಿ-ಜ್ಞಾನಶಕ್ತಿಯೆಂದು ಎರಡುತೆರನಾಯಿತ್ತು.
ಧಾರಣವಿಡಿದು ಇಚ್ಫಾಶಕ್ತಿ-ಆದಿಶಕ್ತಿಯೆಂದು ಎರಡುತೆರನಾಯಿತ್ತು.
ಸಮಾಧಿವಿಡಿದು ಪರಾಶಕ್ತಿ-ಚಿಚ್ಫಕ್ತಿಯೆಂದು ಎರಡುತೆರನಾಯಿತ್ತು.
ಇದಕ್ಕೆ ಭಕ್ತಿ ಆರುತೆರನಾಯಿತ್ತು.
ಅದು ಹೇಗೆಂದಡೆ:
ಸದ್ಭಕ್ತಿ, ನೈಷ್ಠಿಕಭಕ್ತಿ, ಸಾವಧಾನಭಕ್ತಿ, ಅನುಭಾವಭಕ್ತಿ, ಸಮರತಿಭಕ್ತಿ,
ಸಮರಸಭಕ್ತಿಯೆಂದು ಆರು ತೆರನಾಯಿತ್ತು.
ಒಬ್ಬ ನಿಃಕಲಶಿವನು ಒಂದೇ ಮೂರುತೆರನಾಯಿತ್ತು.
ಮೂರೇ ಆರುತೆರನಾಯಿತ್ತು.
ಆರೇ ಮೂವತ್ತಾರುತೆರನಾಯಿತ್ತು.
ಮೂವತ್ತಾರೇ ಇನ್ನೂರಹದಿನಾರುತೆರನಾಯಿತ್ತು.
ಇನ್ನೂರಹದಿನಾರಾದ ಶಿವನು ಮೂವತ್ತಾರಾದ.
ಮೂರಾದ ಶಿವನು ಆರಾದ.
ಆರಾದ ಶಿವನು ಮೂರಾದ, ಮೂರಾದ ಶಿವನು ಒಂದಾದ,
ಒಂದಾದ ಶಿವನು ಅಂಗಲಿಂಗಸಂಬಂಧ ಗರ್ಭೀಕರಿಸಿಕೊಂಡು
ತಾನು ತಾನಾಗಿರ್ಪನು ನೋಡಾ.
ಇಂತಪ್ಪ ನಿಃಕಲಶಿವನ ಮಹಾಮಹಿಮೆ ಕಂಡು
ನೆನೆದ ನೆನಹಿಂಗೆ ತೃಪ್ತಿಯಾಯಿತ್ತು ಕಾಣಾ,
ಅಂದವಾಗಿ ಎನ್ನ ಸಲಹಯ್ಯ
ಝೇಂಕಾರ ನಿಜಲಿಂಗಪ್ರಭುವೆ.