ಋತುವಿಲ್ಲದ ಹಂಸನು ತತ್ತಿಯನಿಕ್ಕುವುದ ಕಂಡೆನಯ್ಯ.
ಆ ತತ್ತಿಯೊಳಗೆ ಒಂದು ವಿಚಿತ್ರವಿಪ್ಪುದು ನೋಡಾ.
ಅದು ಹೇಗೆಂದಡೆ; ಅದಕ್ಕೆ ಶಿರ ಒಂದು, ಮುಖ ಮೂರು.
ಆರು ಕಂಬದ ಶಿವಾಲಯದೊಳಗೆ ಒಬ್ಬ ಬಾಲಕನ ಕಂಡೆನಯ್ಯ.
ಆ ಬಾಲಕನು ಸಪ್ತಶರಧಿಯ ದಾಂಟಿ,
ಅಷ್ಟಕುಲಪರ್ವತದ ಮೇಲೆ,
ಒಂಬತ್ತು ಬಾಗಿಲ ಗುಡಿಯ ಶಿಖರವ ಪೊಕ್ಕು,
ಆ ಶಿಖರದ ಮೇಲೆ ಸ್ವಯಜ್ಞಾನಪ್ರಕಾಶವು
ತೊಳಗಿ ಬೆಳಗುತಿರ್ಪುದು ನೋಡಾ
ಝೇಂಕಾರ ನಿಜಲಿಂಗಪ್ರಭುವೆ.