Index   ವಚನ - 377    Search  
 
ಸಪ್ತೇಳುಸಾಗರಗಳಿಲ್ಲದಂದು, ಅಷ್ಟಕುಲಪರ್ವತಂಗಳಿಲ್ಲದಂದು, ಸ್ವರ್ಗ ಮರ್ತ್ಯ ಪಾತಾಳಂಗಳಿಲ್ಲದಂದು, ರವಿ ಶಶಿಗಳಿಲ್ಲದಂದು, ಆಕಾಶನಿರಾಕಾಶವಿಲ್ಲದಂದು, ಶೂನ್ಯ ನಿಃಶೂನ್ಯವಿಲ್ಲದಂದು, ಏನೇನು ಇಲ್ಲದಂದು ತಾನೇ ನಿರಾಳನಾಗಿರ್ದನಯ್ಯ. ಆ ನಿರಾಳ ಚಿದ್ವಿಲಾಸದಿಂದ ಒಬ್ಬ ಶಿವನಾದ. ಆ ಶಿವನ ಅಂತರಂಗದಲ್ಲಿ ಗುರು ಲಿಂಗಜಂಗಮವಿಪ್ಪುದು ನೋಡಾ. ಆ ಶಿವನು ಮರ್ತ್ಯಲೋಕಕೆ ಬಂದು, ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯರೆಂಬ ಷಡ್ವಿಧಮೂರ್ತಿಗಳ ನಿರ್ಮಿಸಿ, ಭಕ್ತಂಗೆ ಆಚಾರಲಿಂಗವ ಕೊಟ್ಟನಯ್ಯ. ಮಹೇಶ್ವರಂಗೆ ಗುರುಲಿಂಗವ ಕೊಟ್ಟನಯ್ಯ. ಪ್ರಸಾದಿಗೆ ಶಿವಲಿಂಗವ ಕೊಟ್ಟನಯ್ಯ. ಪ್ರಾಣಲಿಂಗಿಗೆ ಜಂಗಮಲಿಂಗವ ಕೊಟ್ಟನಯ್ಯ. ಶರಣಂಗೆ ಪ್ರಸಾದಲಿಂಗವ ಕೊಟ್ಟನಯ್ಯ. ಐಕ್ಯಂಗೆ ಮಹಾಲಿಂಗವ ಕೊಟ್ಟನಯ್ಯ. ಬ್ರಹ್ಮರಂಧ್ರದಲ್ಲಿಪ್ಪ ಸುನಾದ ಚಿತ್ಕಲಾಸ್ವರೂಪವನೆ ತೆಗೆದು ಕರಸ್ಥಲಕ್ಕೆ ಇಷ್ಟಲಿಂಗವ ಕೊಟ್ಟನಯ್ಯ. ಮನಸ್ಥಲಕ್ಕೆ ಪ್ರಾಣಲಿಂಗವ ಕೊಟ್ಟನಯ್ಯ. ಪರಸ್ಥಲಕ್ಕೆ ಭಾವಲಿಂಗವ ಕೊಟ್ಟನಯ್ಯ. ಆ ಪರಸ್ಥಲಕ್ಕೆ ಭಾವಲಿಂಗವ ಕೊಟ್ಟ ಕಾರಣ, ಕರಸ್ಥಲದ ಲಿಂಗಕ್ಕೆ ಗುರುವಾದನಯ್ಯ. ಮನಸ್ಥಲದ ಲಿಂಗಕ್ಕೆ ಗುರುಲಿಂಗವಾದನಯ್ಯ. ಪರಸ್ಥಲದ ಲಿಂಗಕ್ಕೆ ಜಂಗಮವಾದನಯ್ಯ. ಇದು ಕಾರಣ ಇಂತಪ್ಪ ಭೇದವನರಿದು ಆಚರಿಸಬಲ್ಲಾತನೆ ಇಷ್ಟಲಿಂಗಸಂಬಂಧಿ ಕಾಣಾ, ಝೇಂಕಾರ ನಿಜಲಿಂಗಪ್ರಭುವೆ.