Index   ವಚನ - 16    Search  
 
ನಾನಿಲ್ಲದ ಮುನ್ನ ನೀನಾದೆಯಯ್ಯಾ ನೀನಾದಂಥ ಪರಿಯ ಹೇಳಾ. ಎನಗೆ ನೀನು ಗುರುವಾದೆ, ನಿನಗೆ ನಾನು ಶಿಷ್ಯನಾದೆ. ಎನ್ನ ಕರಸ್ಥಲಕ್ಕೆ ನೀನೆ ಬಂದೆಯಲ್ಲದೆ, ನಿನ್ನ ಕರಸ್ಥಲಕ್ಕೆ ನಾನು ಬಂದೆನೆ? ಕ್ರಿಯೆ ಕಷ್ಟ ಕರ್ಮ ಎನಗೆ, ನಿಃಕ್ರಿಯೆ ಸುಖವೆ ನಿನಗೆ. ವ್ರತ ನೇಮ ಶೀಲ ಸಂಬಂಧವೆನಗೆ, ವ್ರತ ನೇಮದಲ್ಲಿದ್ದುದು ನಿಮಗೆ. ಭಕ್ತಿಮಾಡುವ ಕುಸ್ತಿಯೆನಗೆ, ಯುಕ್ತಿಸದನೆ ಮುಕ್ತಿ ನಿನಗೆ ಅಷ್ಟತನುವಿನರ್ಚನೆ ಎನಗೆ, ಅಷ್ಟದಳದ ಮಂಟಪದ ಮಧ್ಯದಲ್ಲಿಯ ಸುಖ ನಿನಗೆ ಅಷ್ಟಾಂಗದ ಯೋಗವ ಮಾಡುವ ಕಷ್ಟದುಃಖವನ[ಗೆ] ನಿಷ್ಠೆ ನಿರಾಲಂಬ ನಿಜದ ಸುಖವು ನಿನಗೆ. ಷಡುಭ್ರಮೆಯೊಳು ಮುಂಬಿದ್ದು ಮುಳುಗುವ ದುಃಖವೆನಗೆ ಷಡುಸ್ಥಲದ ಲಿಂಗಾಂಗದನುಭಾವದ ಸುಖ ನಿನಗೆ. ಇಂತೀ ಎಂಬತ್ತುನಾಲ್ಕು[ಲಕ್ಷ] ಜೀವದ ಭವದ ಮಾಲೆಯ ನೋಡುವ ಕಂಗಳು ಎನಗೆ. ಅಂಗಾಗಗೊಂಡು ಅಂಬರಾತ್ಮಕವಾಗಿ, ಏಕಮೂರ್ತಿಯ ನೋಡುವ ಕಂಗಳು ನಿನಗೆ ಇಂತೀ ಸರ್ವಸುಖದನುಭಾವ ನಿನಗೆ, ಸರ್ವ ಧನದ ಚಿಂತೆಯೆನಗೆ ಇಂತೀ ನಾನು ನೀನು ಎಂಬುದು ಲೀಯವಾಗಿ ಏಕವಾದ ಪ್ರಭೆಯೊಳು ಎರಡು ಮಾಡಿ ತೋರುವ ಲಿಂಗದೋಹ ನಿನ್ನದೋ ಎನ್ನದೋ? ಎಂದುದಾಗಿ, ಇದು ಕಾರಣ, ನಿನ್ನೊಳು ನಾನಿಲ್ಲ, ಎನ್ನೊಳು ನೀನಿಲ್ಲ. ಈ ವಚನದರ್ಥದನುಭಾವದ ತೃಪ್ತಿಯನರಿದಡೆ ನಿನ್ನೊಳು ನಾನುಂಟು, ಎನ್ನೊಳು ನೀನುಂಟು ಮತ್ತೆ ನಾನು ನೀನೆಂಬುಭಯವಾಗಿ ನಿಂದಂತೆ ಕಾಣಾ, ಜಂಗಮಲಿಂಗಪ್ರಭುವೆ.