Index   ವಚನ - 260    Search  
 
ಸ್ಥೂಲಕಾಯ ಶರೀರ ಶುಕ್ಲಶೋಣಿತದಿಂದ ಎರಡಕ್ಕೆ ಎರಡು ಕಾಲು, ಬ್ರಹ್ಮಗ್ರಂಥಿ ಏಳು, ವಿಷ್ಣುಗ್ರಂಥಿ ಏಳು, ರುದ್ರಗ್ರಂಥಿ ಏಳು, ಮೂರೇಳು ಇಪ್ಪತ್ತೊಂದು ಗ್ರಂಥಿಯನುಳ್ಳ ಕಂಕಾಳದಂಡವು. ಆ ಕಂಕಾಳದಂಡದ ದ್ವಾರದಲ್ಲಿ ಷೋಡಶಕಳೆಯನ್ನುಳ್ಳ ವೀಣಾದಂಡವು. ಮೂರುಗೇಣು ಎಲುವು, ಮೂರುಗೇಣು ಮಾಂಸವು, ಮೂವತ್ತೆರಡು ಪಕ್ಕದೆಲುವು, ನಾಲ್ಕುಗೇಣು ಗಾತ್ರವು, ಎಂಟು ಗೇಣು ಉದ್ದವು. ಆದಿ ನಾಲ್ಕು ಬಾಗಿಲನುಳ್ಳುದಾಗಿ, ರಸ ರುಧಿರ ಮಾಂಸ ಮೇದಸ್ಸು ಅಸ್ಥಿ ಮಜ್ಜೆ ಶುಕ್ಲವೆಂಬ ಸಪ್ತಧಾತುಗಳಿಂದ ದೇಹವಾಗಿ ಬೆಳೆಯಿತ್ತು ನೋಡಾ ಅಪ್ರಮಾಣಕೂಡಲಸಂಗಮದೇವಾ.