Index   ವಚನ - 261    Search  
 
ಸಪ್ತಧಾತುಗಳಿಂದ ದೇಹವಾಗಿ ಬೆಳೆದ ಪಿಂಡ ಅಪಾದಮಸ್ತಕವೆಲ್ಲ ಬ್ರಹ್ಮಾಂಡಸಂಗ್ರಹಮಾಗಿ ತೋರ್ಪುದದೆಂತೆಂದಡೆ: ಪಾದತಳದಲ್ಲಿ ಅತಳಲೋಕ, ಪಾದೋರ್ಧ್ವದಲ್ಲಿ ವಿತಳಲೋಕ, ಜಂಘೆಯಲ್ಲಿ ಸುತಳಲೋಕ, ಜಾನುವಿನಲ್ಲಿ ನಿತಳಲೋಕ, ಊರುದ್ವಯದಲ್ಲಿ ತಳಾತಳಲೋಕ, ಗುಹ್ಯಸ್ಥಾನದಲ್ಲಿ ರಸಾತಳಲೋಕ, ಕಟಿಯಲ್ಲಿ ಪಾತಾಳಲೋಕ. ಆ ಕಟಿಸ್ಥಾನದ ಪಾತಾಳಲೋಕದ ಮೇಲೆ ಅಧೋಬ್ರಹ್ಮರಂಧ್ರ ವಳಯಾಕೃತವಾಗಿಹುದು. ಆ ಅಧೋಬ್ರಹ್ಮರಂಧ್ರದ ವಳಯಾಕೃತದೊಳು ಅಮೃತವೆಂಬ ಮಹಾಜಲವಿಹುದು. ಅಮೃತವೆಂಬ ಮಹಾಜಲದಮೇಲೆ ಅಧೋಜ್ಯೋತಿಪ್ರಣಮಲಿಂಗವೆಂಬ ಮಹಾಕಮಠನಿಹುದು. ಆ ಮಹಾಕಮಠನ ಮೇಲೆ ಅಧೋಕುಂಡಲಿಯ ಸರ್ಪನೆಂಬ ಮಹಾವಾಸುಗಿ ಇಹುದು. ಸಂಸ್ಥಿತ, ತೃಣೀಕೃತ, ವರ್ತಿನಿ, ಕ್ರೋಧಿನಿ, ಮೋಹಿನಿ, ಅತಿಚಾರಿಣಿ, ಗಂಧಚಾರಿಣಿ, ವಾಸಿನಿಯೆಂಬ ಅಂತರಂಗದ ಅಷ್ಟಮದಂಗಳೆಂಬ ಅಷ್ಟದಿಕ್‍ಮಹಾಗಜಂಗಳ ಮೇಲೆ ಭೂಲೋಕವಿಹುದು. ಆ ಭೂಲೋಕ ನಾಭಿಸ್ಥಾನಂಗಳಲ್ಲಿಹುದು. ಕುಕ್ಷಿಯಲ್ಲಿ ಭುವರ್ಲೋಕವಿಹುದು. ಹೃದಯಸ್ಥಾನದಲ್ಲಿ ಸ್ವರ್ಲೋಕವಿಹುದು. ವಕ್ಷದಲ್ಲಿ ಮಹರ್ಲೋಕವಿಹುದು. ಕಂಠಸ್ಥಾನದಲ್ಲಿ ಜನರ್ಲೋಕವಿಹುದು. ಲಲಾಟದಲ್ಲಿ ತಪರ್ಲೋಕವಿಹುದು. ಶಿರಸ್ಥಾನದಲ್ಲಿ ಸತ್ಯರ್ಲೋಕವಿಹುದು. ಬ್ರಹ್ಮರಂಧ್ರದಲ್ಲಿ ಮಹಾಪ್ರಳಯಜಲವಿಹುದು. ಶಿಖಾಚಕ್ರದಲ್ಲಿ ಶಿವಾಂಡವಿಹುದು. ಪಶ್ಚಿಮಚಕ್ರದಲ್ಲಿ ಚಿದ್ಬ್ರಹ್ಮಾಂಡವಿಹುದು. ಇದಕ್ಕೆ ಶ್ರೀ ಮಹಾದೇವ ಉವಾಚ: ಪಾದಸ್ವತಲಂ ವಿದ್ಯಾತ್ ಪಾದೋರ್ಧ್ವಂ ವಿತಲಂ ಭವೇತ್ | ಸುತಲಂ ಜಂಘದೇಶೇಷು ನಿತಲಂ ಜಾನುನೋದಯೇ || ತಲಾತಲಂ ಚ ಉಭ್ಯಾಗಂ ಗುಹ್ಯಸ್ಥಾನೇ ರಸಾತಲಂ | ಪಾತಾಲಂ ಕಟಿರಿತ್ಯುಕ್ತಂ ಸಪ್ತಮಂ ಪರಿಕೀರ್ತಿತಂ || ಭೂಲೋಕಂ ನಾಭಿಮಧ್ಯಸ್ಥಂ ಭುವರ್ಲೋಕಂತು ಕುಕ್ಷಿಗಂ | ಹೃದಿಸ್ಥಂ ಸ್ವರ್ಲೋಕಂತು ಮಹರ್ಲೋಕಂತು ವಕ್ಷಸಿ || ಕಂಠಸ್ಥಂ ಜನರ್ಲೋಕಂತು ತಪರ್ಲೋಕಂ ಲಲಾಟಕೇ | ಸತ್ಯರ್ಲೋಕಮೂರ್ದ್ಧನ್ಯಸ್ತಿಂ ಭುವನಾನಿ ಚತುರ್ದಶ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.