Index   ವಚನ - 262    Search  
 
ಇನ್ನು ಸಪ್ತಕುಲಪರ್ವತಂಗಳ ಸ್ಥಾನವದೆಂತೆಂದಡೆ: ತ್ರಿಕೋಣೆಯಲ್ಲಿ ಮಹಾಮೇರುಪರ್ವತವಿಹುದು. ಅರ್ಧಕೋಣೆಯಲ್ಲಿ ಮಂದರಪರ್ವತವಿಹುದು. ದಕ್ಷಿಣಕೋಣೆಯಲ್ಲಿ ಕೈಲಾಸಪರ್ವತವಿಹುದು. ವಾಮಕೋಣೆಯಲ್ಲಿ ಹಿಮಾಲಯಪರ್ವತವಿಹುದು. ಊರ್ಧ್ವಭಾಗದಲ್ಲಿ ನಿಷಾಧಪರ್ವತವಿಹುದು. ದಕ್ಷಿಣಭಾಗದಲ್ಲಿ ಗಂಧಮಾದನಪರ್ವತವಿಹುದು. ರೋಮಲೇಖೆಯಲ್ಲಿ ವಿಂಧ್ಯಪರ್ವತವಿಹುದು. ಇದಕ್ಕೆ ಈಶ್ವರ ಉವಾಚ: ತ್ರಿಕೋಣೇ ಸಂಸ್ಥಿತೋ ಮೇರುಃ ಅರ್ಧಕೋಣೇತು ಮಂದರಃ | ಕೈಲಾಸೋ ದಕ್ಷಿಣೆಕೋಣೇ ವಾಮಕೋಣೇ ಹಿಮಾಲಯಃ || ನಿಷಾದಸ್ಸೂರ್ಧ್ವಭಾಗೇ ಚ ದಕ್ಷಿಣೇ ಗಂಧಮಾದನಃ | ವಿಂಧ್ಯಸ್ತು ರೋಮಲೇಖಾಯಾಂ ಸಪ್ತಮೇ ಕುಲಪರ್ವತಃ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.