Index   ವಚನ - 653    Search  
 
ಇನ್ನು ನಿರಂಜನಷಡುಚಕ್ರಂಗಳ ಮೇಲಣ ನಾಲ್ಕು ಚಕ್ರಂಗಳ ವಿವರವೆಂತೆಂದಡೆ: ಸ್ವಯಾನಂದಚಕ್ರವೆಂದು, ಸ್ವಯಾನಂದ ಘನಚಕ್ರವೆಂದು, ಸ್ವಯಾನಂದ ಮಹಾಘನಚಕ್ರವೆಂದು, ಸ್ವಯಾನಂದ ಮಹಾಘನಾತೀತಚಕ್ರವೆಂದು ಈ ನಾಲ್ಕು ಚಕ್ರಂಗಳು ಅನಂತಕೋಟಿ ಪದ್ಮವನೊಳಕೊಂಡು ಪದ್ಮವಿಲ್ಲದಿಹುದು. ಅನಂತಕೋಟಿ ವರ್ಣಗಳನೊಳಕೊಂಡು ವರ್ಣವಿಲ್ಲದಿಹುದು. ಅನಂತಕೋಟಿ ಅಕ್ಷರಗಳನೊಳಕೊಂಡು ಅಕ್ಷರವಿಲ್ಲದಿಹುದು. ಅನಂತಕೋಟಿ ಶಕ್ತಿಗಳನೊಳಕೊಂಡು ಶಕ್ತಿಯಿಲ್ಲದಿಹುದು. ಅನಂತಕೋಟಿ ಅಧಿದೇವತೆಗಳನೊಳಕೊಂಡು ಅಧಿದೇವತೆಯಿಲ್ಲದಿಹುದು. ಅನಂತಕೋಟಿ ನಾದವನೊಳಕೊಂಡು ನಾದವಿಲ್ಲದಿಹುದು. ಅನಂತಕೋಟಿ ಬೀಜಾಕ್ಷರವನೊಳಕೊಂಡು ಬೀಜವಿಲ್ಲದೆ ಬೆಳಗುತ್ತಿಹುದು. ಆ ಚಕ್ರಂಗಳು ವಾಚ್ಯಕ್ಕೂ ವಾಚ್ಯಾತೀತವಾಗಿಹುದು. ಮನಕ್ಕೂ ಮನಾತೀತವಾಗಿಹುದು, ವರ್ಣಕ್ಕೂ ವರ್ಣಾತೀತವಾಗಿಹುದು, ತತ್ತ್ವಕ್ಕೂ ತತ್ತ್ವಾತೀತವಾಗಿಹುದು, ಜ್ಞಾನಕ್ಕೂ ಜ್ಞಾನಾತೀತ ವಾಗಿಹುದು, ಉಪಮೆಗೂ ಉಪಮಾತೀತವಾಗಿಹುದು, ಚಕ್ರಕ್ಕೂ ಚಕ್ರಾತೀತವಾಗಿಹುದೆಂದು ಅಸಿಪದಾತೀತಾಗಮದಲ್ಲಿ ಪ್ರಸಿದ್ಧವಾಗಿಹುದು ನೋಡಾ ಅಪ್ರಮಾಣಕೂಡಲಸಂಗಮದೇವಾ.