Index   ವಚನ - 910    Search  
 
ವೇದಾಂತತತ್ವವೆಂಬ ಅಷ್ಟವಿಂಶತಿತತ್ವವನೊಳಕೊಂಡು ಮಾಹೇಶ್ವರತತ್ವ, ಸದಾಶಿವತತ್ವ, ಶಿವತತ್ವವೆಂಬ ಏಕತ್ರಿಂಶತತ್ವವನೊಳಕೊಂಡು ತ್ವಂಪದ ತತ್‍ಪದ ಅಸಿಪದವೆಂಬ ಮೂವತ್ತಾರುತತ್ವವನೊಳಕೊಂಡು ವೇದಾಂತಿಯ ಮನವಾರ್ತೆ. ತ್ವಂಪದ ತತ್‍ಪದ ಅಸಿಪದವೆಂಬ ತ್ರಿವಿಧ ಪದಂಗಳನೊಳಕೊಂಡು, ತೊಂಬತ್ತಾರುತತ್ವವನೊಳಕೊಂಡು, ಷಡಂಗವನೊಳಕೊಂಡು, ಷಟ್‍ಶಕ್ತಿಗಳನೊಳಕೊಂಡು, ಸ್ವರಾಕ್ಷರ ಕಲಾಕ್ಷರ ಏಕಾಕ್ಷರವನೊಳಕೊಂಡು, ಅನೇಕಕೋಟಿ ವೇದಂಗಳನೊಳಕೊಂಡು, ಅನೇಕಕೋಟಿ ಚಂದ್ರಾದಿತ್ಯರನೊಳಕೊಂಡು, ತ್ರೈಲೋಕ್ಯ ಸಚರಾಚರಂಗಳನೊಳಕೊಂಡು, ತಿರುತಿರುಗಿ ಬಹ ಅನೇಕಕೋಟಿ ಕಲ್ಪಾಂತರವನೊಳಕೊಂಡು, ಷಟ್‍ಸ್ಥಲಬ್ರಹ್ಮವ ಗರ್ಭೀಕರಿಸಿಕೊಂಡು, ಆದಿ ಮಧ್ಯ ಅವಸಾನವಿಲ್ಲದೆ, ಅಖಂಡಮಹಾಜ್ಯೋತಿರ್ಮಯಲಿಂಗವಾಗಿದ್ದುದು ನೋಡಾ ಅಪ್ರಮಾಣಕೂಡಲಸಂಗಮದೇವಾ.