Index   ವಚನ - 911    Search  
 
ಇಂದ್ರ ಇಂದ್ರರೆಂಬುವರನೇಕ ಕೋಟಿ ಲಿಂಗಗರ್ಭದಲ್ಲಿ ಲಯವಾಗಲು, ಮೂವತ್ತುಮೂರುಕೋಟಿ ದೇವರ್ಕಳಿಗೆ ಒಂದು ಸಂವತ್ಸರವಾಯಿತ್ತು. ಅಂಥ ಮೂವತ್ತುಮೂರುಕೋಟಿ ದೇವರ್ಕಳು ಅನೇಕಕೋಟಿ ಲಿಂಗಗರ್ಭದಲ್ಲಿ ಲಯವಾಗಲು ಬ್ರಹ್ಮನಿಗೊಂದು ದಿನವಾಯಿತ್ತು. ಅಂಥ ಬ್ರಹ್ಮಾದಿಗಳನೇಕಕೋಟಿ ಲಿಂಗಗರ್ಭದಲ್ಲಿ ಲಯವಾಗಲು ಮೀನಜನೆಂಬ ಮುನಿಗೊಂದು ಮೀನ ಸಡಿಲಿತ್ತು. ಅಂಥ ಮೀನಜನೆಂಬ ಮುನಿಗಳನೇಕಕೋಟಿ ಲಿಂಗಗರ್ಭದಲ್ಲಿ ಲಯವಾಗಲು ರೋಮಜನೆಂಬ ಮುನಿಗೊಂದು ರೋಮ ಸಡಿಲಿತ್ತು. ಅಂಥ ರೋಮಜನೆಂಬ ಮುನಿಗಳನೇಕಕೋಟಿ ಲಿಂಗಗರ್ಭದಲ್ಲಿ ಲಯವಾಗಲು ಡೊಂಕಜನೆಂಬ ಮುನಿಗೊಂದು ಡೊಂಕು ಸಡಿಲಿತ್ತು. ಅಂಥ ಡೊಂಕಜನೆಂಬ ಮುನಿಗಳನೇಕಕೋಟಿ ಲಿಂಗಗರ್ಭದಲ್ಲಿ ಲಯವಾಗಲು ನೇತ್ರಜನೆಂಬ ಮುನಿಗೊಂದು ನೇತ್ರ ಸಡಿಲಿತ್ತು. ಅಂಥ ನೇತ್ರಜನೆಂಬ ಮುನಿಗಳನೇಕ ಕೋಟಿ ಲಿಂಗಗರ್ಭದಲ್ಲಿ ಲಯವಾಗಲು [ಚಿ]ಪ್ಪಜನೆಂಬ ಮುನಿಗೊಂದು ಚಿಪ್ಪು ಸಡಿಲಿತ್ತು. ಅಂಥ [ಚಿ]ಪ್ಪಜನೆಂಬ ಮುನಿಗಳನೇಕಕೋಟಿ ಲಿಂಗಗರ್ಭದಲ್ಲಿ ಲಯವಾಗಲು ಪಾದಜನೆಂಬ ಮುನಿಗೊಂದು ಪಾದ ಸಡಿಲಿತ್ತು. ಅಂಥ ಪಾದಜನೆಂಬ ಮುನಿಗಳನೇಕಕೋಟಿ ಲಿಂಗಗರ್ಭದಲ್ಲಿ ಲಯವಾಗಲು ಚಿಟುಕನೆಂಬ ಮುನಿಗೊಂದು ಚಿಟುಕು ಸಡಿಲಿತ್ತು. ಅಂಥ ಚಿಟುಕಜನೆಂಬ ಮುನಿಗಳನೇಕಕೋಟಿ ಲಿಂಗಗರ್ಭದಲ್ಲಿ ಲಯವಾಗಲು ಸಾರಂಗನೆಂಬ ಮುನಿಗೊಂದು ರೇಣು ಕುಂದಿತ್ತು. ಅಂಥ ಸಾರಂಗನೆಂಬ ಮುನಿಗಳನೇಕಕೋಟಿ ಲಿಂಗಗರ್ಭದಲ್ಲಿ ಲಯವಾಗಲು ವಿಷ್ಣುವಿಗೊಂದು ದಿನವಾಯಿತ್ತು. ಅಂಥ ವಿಷ್ಣುಗಳನೇಕಕೋಟಿ ಲಿಂಗಗರ್ಭದಲ್ಲಿ ಲಯವಾಗಲು ರುದ್ರನ ಕಣ್ಣೆವೆ ಹಳಚಿತ್ತು. ಅಂಥ ರುದ್ರಾದಿಗಳನೇಕಕೋಟಿ ಲಿಂಗಗರ್ಭದಲ್ಲಿ ಲಯವಾಗಲು ಅತಲ ಸುತಲ ವಿತಲ ತಲಾತಲ ಮಹಾತಲ ರಸಾತಲ ಪಾತಾಲ, ಭೂಲೋಕ ಭುವರ್ಲೋಕ ಸ್ವರ್ಲೋಕ ಮಹರ್ಲೋಕ ಜನರ್ಲೋಕ ತಪೋಲೋಕ ಸತ್ಯಲೋಕವೆಂಬ ಹದಿನಾಲ್ಕು ಲೋಕವು ಲಿಂಗಗರ್ಭದಲ್ಲಿ ಲಯವಾಗಲು ಇಂತೀ ಹದಿನಾಲ್ಕು ಲೋಕವನೊಳಕೊಂಡು ಅತ್ತತ್ತವಾಗಿಹ ಅಖಂಡಮಹಾಜ್ಯೋತಿರ್ಮಯ ಲಿಂಗದೊಳಗಿದ್ದವರೆಲ್ಲರು ಲಿಂಗವನರಿಯದೆ ಸತ್ತರು. ಲೋಕದೊಳು ಸುಳಿವ ವೇಷಧಾರಿಗಳಿಗೆಂತು ಸಾಧ್ಯವಹುದು ನೋಡಾ. ಸಾಕ್ಷಿ: ಆಕಾಶಗತಲಿಂಗಾನಾಂ ಪೃಥ್ವೀಗತ ಪೀಠಯಃ | ಆಲಯಂ ಋಷಿದೇವಾನಾಂ ಲಯನಾಂ ಲಿಂಗಮುಚ್ಯತೇ || ಲಿಂಗಮಧ್ಯೇ ಜಗತ್ಸರ್ವಂ ತ್ರೈಲೋಕ್ಯಂ ಸಚರಾಚರಂ | ಲಿಂಗಬಾಹ್ಯಾತ್ ಪರಂ ನಾಸ್ತಿ ತಸ್ಮೈ ಶ್ರೀಗುರವೇ ನಮಃ ||'' ಎಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.