Index   ವಚನ - 916    Search  
 
ಹೆಣ್ಣೆಂಬ ಭೂತವ ಸೋಂಕಿ ಹೆಣನಾಗಿಹ ಗುರುಗಳು ಗುರುವಲ್ಲವೆಂದುದು ನೋಡಾ ಶ್ರುತಿಗಳು, ಹೊನ್ನೆಂಬ ಭೂತವ ಸೋಂಕಿ ಹೊಲೆಯನಾಗಿಹ ಗುರುಗಳು ಗುರುವಲ್ಲವೆಂದುದು ನೋಡಾ ಶ್ರುತಿಗಳು. ಕಾಮವೆಂಬ ಭೂತವ ಸೋಂಕಿ ಕರ್ಮಿಯಾಗಿಹ ಗುರುಗಳು ಗುರುವಲ್ಲವೆಂದುದು ನೋಡಾ ಶ್ರುತಿಗಳು. ಪಾಶವೆಂಬ ಭೂತವ ಸೋಂಕಿ ಪಾಪಿಯಾಗಿಹ ಗುರುಗಳು ಗುರುವಲ್ಲವೆಂದುದು ನೋಡಾ ಶ್ರುತಿಗಳು. ಈ ಪಂಚಭೂತಂಗಳನತಿಗಳದು ಮಹಾಘನದಲ್ಲಿ ನಿಂದ ಮನವು ನಿಜಗುರುವಿಂಗೆ ನಮೋ ನಮೋ ಎನುತಿದ್ದುದು ನೋಡಾ ಶ್ರುತಿಗಳು, ಅಪ್ರಮಾಣಕೂಡಲಸಂಗಮದೇವಾ.