Index   ವಚನ - 83    Search  
 
ಐಶ್ವರ್ಯದಿಂದ ಶರೀರವು ಪ್ರಕಾಶಿಸುತ್ತಿರ್ಪುದು, ಮನಸ್ಸಿನಿಂದ ಜೀವನು ಪ್ರಕಾಶಿಸುತ್ತಿರ್ಪನು, ಶರೀರದ ಸುಖದುಃಖಂಗಳಿಗೆ ಐಶ್ವರ್ಯವೇ ಕಾರಣಮಾಗಿರ್ಪಂತೆ, ಜೀವನ ಸುಖದುಃಖಕ್ಕೆ ಮನಸ್ಸೇ ಕಾರಣಮಾಗಿರ್ಪುದು. ಅರ್ಥವಂ ಪ್ರಪಂಚಮುಖದಲ್ಲಿ ವೆಚ್ಚಿಸಿ, ಅರ್ಥಕ್ಕೆ ತಕ್ಕ ಉಪಾಂಗವಂ ಸಂಪಾದಿಸಿ, ತದುಪಭೋಗಯುಕ್ತಮಾಗಿರ್ಪ ಶರೀರದಂತೆ ಮನಸ್ಸನ್ನು ಕರ್ಮಮುಖದಲ್ಲಿ ವೆಚ್ಚಿಸಿ, ಆ ಮನಸ್ಸನ್ನಟ್ಟಿ, ಸೂಕ್ಷ್ಮಶರೀರವಂ ಸಂಪಾದಿಸುತ್ತಾ ಅದರಲ್ಲಿ ಜೀವನನುಭವಿಸುತ್ತಿಹನು. ಪ್ರಾಣವು ಶರೀರದಲ್ಲಿ ಬದ್ಧಮಾಗಿರ್ಪುದು, ಅರ್ಥದಲ್ಲಿ ಮನಸ್ಸು ಬದ್ಧಮಾಗಿಹುದು, ಜಡರೂಪಮಾದೈಶ್ವರ್ಯವು ಶರೀರವಂ ಹೊಂದಿ, ತಾನು ಚೈತನ್ಯರೂಪಮಾಗಿ ಸಕಲಪದಾರ್ಥಗಳನ್ನು ಶರೀರಮುಖಕ್ಕೊದಗಿಸಿಕೊಡುವಂತೆ ಜಡರೂಪಮಾದ ಮನಸ್ಸು ಜೀವನಂ ಹೊಂದಿದಲ್ಲಿ, ಆ ಜೀವನಿಗೂ ಪರಮಚೈತನ್ಯವಿತ್ತು. ತಾನು ಚೈತನ್ಯರೂಪಮಾಗಿ ಸಂಚರಿಸುತ್ತಾ, ಅನುಭವಯೋಗ್ಯವಾದ ಪದಾರ್ಥಂಗಳನ್ನು ಜೀವನಿಗೆ ಸಂಪಾದಿಸಿಕೊಡುತ್ತಿರ್ಪುದು. ಸಕಲಪ್ರಪಂಚವು ಅರ್ಥವಿದ್ದಲ್ಲಿ ಸೇರಿ, ಆ ಅರ್ಥವನ್ನೇ ಜೀವನವಂ ಮಾಡಿಕೊಂಡಿರ್ಪಂತೆ, ಸಕಲಗುಣಂಗಳು ಮನಸ್ಸನ್ನೇ ಸೇರಿ, ಆ ಮನಸ್ಸನ್ನೇ ಜೀವನವಂ ಮಾಡಿಹನು. ಆ ಅರ್ಥವುಳ್ಳ ಪುರುಷನು ಸಕಲರಿಗೂ ತಾನೂ ಪ್ರಭುವಾಗಿರ್ಪಂತೆ, ಮನಸ್ಸುಳ್ಳ ಜೀವನು ಸಕಲಗುಣಂಗಳಿಗೂ ತಾನೇ ಸ್ವಾಮಿಯಾಗಿರ್ಪನು. ಹೊನ್ನಿನಿಂದ ಹೆಣ್ಣನ್ನೂ ಹೆಣ್ಣಿನಿಂದ ಮಣ್ಣನ್ನೂ ಸಾಧಿಸಿ, ಆ ಹೆಣ್ಣು ಮಣ್ಣುಗಳಿಂದ ಹೊನ್ನಂ ಸಾಧಿಸುವಂತೆ, ಮನದಿಂದ ಅಹಂಬುದ್ಧಿಯು, ಅಹಂಬುದ್ಧಿಯಿಂ ಮನಸ್ಸು ಸಾಧ್ಯಮಪ್ಪದು. ಐಶ್ವರ್ಯವಿಲ್ಲದೆ ಶರೀರಮೋಕ್ಷ, ಮನಸ್ಸಿಲ್ಲದೆ ಜೀವನ್ಮುಕ್ತಿ. ಇಂತಪ್ಪ ವಿಚಿತ್ರವನ್ನು ಗುರುಮುಖದಿಂದ ತಿಳಿದ ಮಹಾಪುರುಷನು ಜಂಗಮರೂಪಿಯಾದ ನಿನಗೆ ಇಂದ್ರಿಯಮುಖದಲ್ಲರ್ಥವನ್ನು ಸಮರ್ಪಿಸಿ, ಲಿಂಗರೂಪಿಯಾದ ನಿನಗೆ ಭಾವಮುಖದಲ್ಲಿ ಮನಸ್ಸನ್ನು ಸಮರ್ಪಿಸಿದಲ್ಲಿ, ಆ ಲಿಂಗವೇ ಪ್ರಾಣಮಪ್ಪುದು. ಅರ್ಥವಂಚನೆಯೂ ಮನೋವಂಚನೆಯೂ ಲಿಂಗಜಂಗಮಮುಖದಲ್ಲಿ ಲಯಮಪ್ಪುದೇ ಲಿಂಗೈಕ್ಯ ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.