Index   ವಚನ - 3    Search  
 
ಮುಕ್ತಿಗೆ ನಿಜಮಂದಿರವಾಗಿ ಸಾಕಾರದ ಲೀಲೆಯಿಂದ ಚರಿಸುವ ನಿಲುಕಡೆಯೆಂತೆಂದೊಡೆ: ಹೃತ್ಪೀಠ ಏಕಾಂತವಾಸವಾದ ಭಾವಾಪುರದ ನಿಜಾಲಯದಿಂದ ಗಣಸಮ್ಮೇಳದ ನೆನಹುದೋರಿ, ಚಿನ್ಮಯಲೀಲೆಯಿಂ ಒರ್ವನೆ ಹೊರಟು, ಕರಣಾಪುರದ ಚಿದ್ರೂಪಮೂರ್ತಿ ವಿಶ್ವಕುಟುಂಬ ಚಿದಾದಿತ್ಯನೊಡಗೂಡಿ, ಆತನ ಕರಕೊಂಡು, ಅಲ್ಲಿಂದ ಕಾಯಪುರಕ್ಕೆ ಬಂದು, ಚಿತ್ಸೂರ್ಯ ಚಂದ್ರಬೀದಿಗಳೆಂಬ ಪೂರ್ವ ಪಶ್ಚಿಮ ಉತ್ತರ ದಕ್ಷಿಣ ನಾಲ್ಕು ಕವಾಟವ ತೆಗೆದವರ ಚೌಕಮಧ್ಯದಲ್ಲಿ ನಿಂದಾಕ್ಷಣವೆ ಪರನಾದ ಬಿಂದು ಕಳೆಗಳೆಂಬ ಮೂಲಮಂತ್ರಧ್ಯಾನಾರೂಢನಾಗಿ, ಪರದೆಯ ತೆಗೆದು ಸದ್ರೂಪಮೂರ್ತಿ ಚಿದ್ಘನಮಹಾನಿಜೇಷ್ಠಲಿಂಗದಲ್ಲಿ ಕ್ರಿಯಾದೃಷ್ಟಿನಷ್ಟ. ಅನಾದಿ ಗುರುಲಿಂಗಜಂಗಮ ಪ್ರಮಥಗಣಸಮ್ಮೇಳವ ಸ್ತೋತ್ರಂಗೈದು, ಮಹದರುವೆಂಬ ಸದ್ಭಕ್ತಿರಸದೋರಿ ಹರುಷಾನಂದಶರಧಿ ಮೇರೆದಪ್ಪಿದಂತೆ, ಹರಶರಣಗಣಾರಾಧ್ಯರಿಗೆ ಕರ ಶಿರ ಮನ ಬಾಗಿ ಶರಣು ಹೊಕ್ಕು, ಭೃತ್ಯಾಚಾರಿಯಾಗಿ ಘನಮನವೇದ್ಯತ್ವದಿಂದ ಸ್ಥೂಲ-ಸೂಕ್ಷ್ಮ-ಕಾರಣಾಚಮನಗಳೊದಗಿದಂತೆ ವಿಸರ್ಜನಂಗೈದು, ಉದಕವ ಬಳಸಿ, ನಿರ್ಮಲಚಿತ್ತದಿಂದ ಪಾದೋದಕ ಲಿಂಗೋದಕಂಗಳಲ್ಲಿ ಮುಖಮಜ್ಜನವ ಮಾಡಿ, ಶುದ್ಧಾಸನದೊಳ್ ಮೂರ್ತಿಗೊಂಡು, ಕ್ರಿಯಾಭಸಿತ ಪತ್ರಿ ಪುಷ್ಪ ಧೂಪ ದೀಪಾರತಿ ಮೊದಲಾದ ಪರಿಪೂರ್ಣ ದ್ರವ್ಯಗಳೊದಗಿದಂತೆ ಲಿಂಗಾರ್ಚನೆ ಜಪಕ್ರಿಯೆಗಳ ಸಮರ್ಪಣವಮಾಡಿ, ತನ್ನ ತಾನೆ ಬೆಳಗುವಾತ ನಿರವಯಪ್ರಭು ಮಹಾಂತ ತಾನೇ ನೋಡಾ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.