ಸತ್ಯಶುದ್ಧ ನಡೆ ನುಡಿ ಧೃಡಚಿತ್ತ ಉಳ್ಳಾತನಾಗಿ,
ಅಲ್ಲಿಂದ ಬಹಿರ್ದೇಶಕ್ಕೆ ಹೋಗಿ,
ಶುಚಿಯಾದ ಸ್ಥಳದಲ್ಲಿ ವಾಯುಬೀಸುವ ಕಡೆಗೆ ಮುಖಮಾಡಿ,
ಸ್ಥೂಲ ಸೂಕ್ಷ್ಮವ ವಿಸರ್ಜಿಸಿ, ಮತ್ತೊಂದು ಸ್ಥಲದಲ್ಲಿ ಕುಳಿತು,
ಮೃತ್ತಿಕೆಯಾದರೂ ಸರಿಯೆ,
ಬೂದಿಯಾದರೂ ಒದಗಿದಂತಾದ್ದು ತೆಗೆದುಕೊಂಡು,
ಶ್ಲೋಕ:
ಲಿಂಗೇಕ ಗುದಃ ಪಂಚಾನಾಂ ವಾಮಹಸ್ತಾದಶಃ ಶುಚಿಃ|
ಉಭಯ ಕರಸಪ್ತಂ ಚ ಪಾದಂ ಚ ಪಂಚಪಂಚಕಂ|
ಓಷ್ಟ್ರಕಂ ತ್ರಿವಿಧಶ್ಚೈವಾ ಮೃತ್ತಿಕಾ ಶೌಚಲಕ್ಷಣಂ|| (?)
ಈ ಹೀಂಗೆಂದುದಾಗಿ ಹರವಾಕ್ಯಪ್ರಮಾಣಿನಿಂದ,
ಪ್ರಥಮದಲ್ಲಿ ಗುಹ್ಯಕ್ಕೆ ಒಂದು ವೇಳೆ
ಮೃತ್ತಿಕೆಯಿಂದ ಸ್ಪರ್ಶನವಮಾಡಿ ತೊಳೆವುದು.
ಮತ್ತಂ, ಗುದಕ್ಕೆ ಐದು ವೇಳೆ ಸ್ಪರ್ಶನವ ಮಾಡಿ ತೊಳೆವುದು.
ತೃತೀಯದಲ್ಲಿ ವಾಮಹಸ್ತಕ್ಕೆ ಹತ್ತು ವೇಳೆ ಸ್ಪರ್ಶಿಸಿ ತೊಳೆವುದು.
ತಾನೊಬ್ಬನೆ ಗೋಪ್ಯವಾಗಿ ಆಚರಿಸುವುದು.
ಮತ್ತಾ, ಶಕ್ತಿಸಂಬಂಧವಾದ ಮಾರ್ಗಕ್ರಿಯೆ ಮೂರೆನಿಸುವದು.
ಅಲ್ಲಿಂದ ಬಂದು ಉಭಯ ಹಸ್ತವ ಏಳುವೇಳೆ ಸ್ಪರ್ಶನವ ಮಾಡಿ
ತೊಳೆವುದೆ ಚತುರ್ಥವೆನಿಸುವುದು.
ಎರಡುಪಾದಗಳ ಐದುವೇಳೆ ಸ್ಪರ್ಶನವ ಮಾಡಿ
ತೊಳೆವುದೆ ಪಂಚಮವೆನಿಸುವುದು.
ಆ ತಂಬಿಗೆಯ ಪೂರ್ವದ್ರವವನಾರಿಸಿ,
ಮೂರುವೇಳೆ ಬೆಳಗುವುದೆ ಷಡ್ವಿಧವೆನಿಸುವುದು.
ಇದು ರಹಸ್ಯಮುಖದಲ್ಲಿ ಆಚರಿಸುವುದು.
ಶಿವಸಂಬಂಧವಾದ ಮೀರಿದ ಕ್ರಿಯೆ ಮೂರೆನಿಸುವವು.
ಹೀಂಗೆ ತೊಳೆದಲ್ಲಿ ಷಟ್ ಸ್ಥಲಸಂಬಂಧವೆನಿಸುವುದು.
ಇದೆ ಪ್ರಮಥಗಣಮಾರ್ಗದ ವಿಸರ್ಜನೆಯ
ಪರಿಣಾಮದ ಗೊತ್ತು ನೋಡಿರಯ್ಯಾ
ನಿರವಯಪ್ರಭು ಮಹಾಂತನ ಒಡಗೂಡುವ ಸನ್ಮಾರ್ಗ ಕಾಣಾ
ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.