Index   ವಚನ - 9    Search  
 
ಪರಾತ್ಪರ ಚಿದ್ಬ್ರಹ್ಮಪರಶಿವಮೂರ್ತಿಯು ಮನು-ಮುನಿ, ಸಿದ್ಧ-ಸಾಧಕ, ಯಕ್ಷ-ರಾಕ್ಷಸ, ಯತಿ-ವ್ರತಿ, ಶೀಲ-ನೇಮಗಳ ಭಾವಾಭಾವಕ್ಕೆ ಮೆಚ್ಚಿ, ಅವರವರ ಕಾಂಕ್ಷೆಗಳಂತೆ ಫಲಪದದಾಯುಷ್ಯಕ್ಕೆ ಯೋಗ್ಯರಾಗಿ, ಅಷ್ಟಮಹದೈಶ್ವರ್ಯದಿಂದ ಬ್ರಹ್ಮನ ಉತ್ಪತ್ತಿ, ವಿಷ್ಣುವಿನ ಸ್ಥಿತಿ, ರುದ್ರನ ಲಯ, ಈಶ್ವರನ ತಿರೋಧಾನ, ಸದಾಶಿವನ ಅನುಗ್ರಹಕ್ಕೆ ಕಾರಣರಾಗಿ, ಶೈವಮಾರ್ಗದಿಂದೆ ನಿಜಮೋಕ್ಷವ ಕಾಣದೆ, ಅಷ್ಟಾವರಣದ ಚಿದ್ಬೆಳಗ ಸೇರಿದ ಸದ್ಭಕ್ತಿ-ಜ್ಞಾನ-ವೈರಾಗ್ಯ, ಸತ್ಯ-ಸದಾಚಾರವನರಿಯದೆ, ಇಹಲೋಕದ ಭೋಗವ ಪರಲೋಕದ ಮೋಕ್ಷಾಪೇಕ್ಷೆಯಿಂದ ಎಡೆಯಾಡುತ್ತ, ಪುಣ್ಯ-ಪಾಪ, ಸುಖ-ದುಃಖ, ಸ್ತುತಿ-ನಿಂದೆ, ಸಿರಿ-ದರಿದ್ರ. ಆಶೆ-ಆಮಿಷ, ರೋಗ-ರುಜಿನಗಳಿಂದ, ಶಿವನೆ ಹರನೆ ಭವನೆಯೆಂದು ಗೋಳಿಡುವವರಿಗೆ, ನಿರಾಕಾರಪರಿಪೂರ್ಣ ಪರಶಿವನು ಆಗಳು ಹಿಂದಾಗಿ, ಶಿವಗಣವ ಸೇರುವಂತೆ ಯೋಗಾಭ್ಯಾಸವ ತೋರಿ, ಅನಂತಮಣಿಮಾಲೆ ಜಪಕ್ರಿಯಾನುಷ್ಠಾನ ಮಂತ್ರ-ತಂತ್ರ-ಯಂತ್ರ-ಯಜ್ಞಾದಿಗಳ ಹೇಳಿ, ಪರಮಾರಾಧ್ಯ ನಿರವಯಪ್ರಭು ಮಹಾಂತನ ಗಣಾಚಾರಕ್ಕೆ ಅಯೋಗ್ಯರೆನಿಸಿರ್ಪರು ಕಾಣಾ ಸಿದ್ಧಮಲ್ಲಿಕಾರ್ಜುಲಿಂಗೇಶ್ವರ.