ಇಂತೆಸೆವ ಅಂತರಂಗ ಬಹಿರಂಗ ಪರಿಪೂರ್ಣ ಭಕ್ತಗಣಾರಾಧ್ಯರು,
ಲಿಂಗಜಂಗಮದ ಪಾದಪೂಜೆಯ ಮಾಡುವ ವಿವರವೆಂತೆಂದೊಡೆ:
ಜಂಗಮಮೂರ್ತಿಗಳ ಸಮ್ಮುಖದಲ್ಲಿ ಗದ್ದುಗೆಯ ಹಾಕಿ,
ಗಣಸಮೂಹ ಕೂಡಿದ ಹಾಂಗೆ ಅವರಿಗೆ
ಅರ್ಘ್ಯಪಾದ್ಯಾಚಮನವ ಮಾಡಿಸಿ,
ಮೂರ್ತವಮಾಡಿದ ಮೇಲೆ,
ದೀಕ್ಷಾಪಾದೋದಕದಲ್ಲಿ ಚಿದ್ಭಸಿತದಿಂದ ಪಂಚಾಂಗುಲಿಯ ಸ್ಪರ್ಶಿಸಿ
ಚಿನ್ನಾದಪ್ರಣಮವ ಲಿಖಿಸಿದಲ್ಲಿ,
ಪಾದೋದಕ ಭಸ್ಮೋದಕ ಮಂತ್ರೋದಕವೆನಿಸುವದು.
ಇಂತೆಸೆವ ಪರಮಾನಂದ ಜಲದಿಂ ಲಿಂಗಾಭಿಷೇಕವ ಮಾಡಿಸಿ,
ಆ ಶ್ರೀವಿಭೂತಿ ಪುಷ್ಪ ಪತ್ರಿಗಳ ಶೃಂಗರಿಸಿ, ಉಪಚಾರಗಳ ಕೊಟ್ಟು,
ಅವರು ತಾನು ಅಷ್ಟಾವರಣಸ್ತೋತ್ರಗಳಿಂದ,
ಆ ನಿರಂಜನಜಂಗಮಲಿಂಗಕ್ಕೆ ಹಿಂದೆ ಮುಂದೆ
ಲಿಂಗಮೂರ್ತಿಗಳಿಲ್ಲದಂತೆ ಎಡಬಲ ವಿಚಾರಿಸಿ,
ಕೆಡಪಿದ ದಂಡದಂತೆ ಸರ್ವಾಂಗಪ್ರಣುತನಾಗಿ ಪೊಡಮಟ್ಟು,
ಲಿಂಗಜಂಗಮನಿರೀಕ್ಷಣೆಭರಿತವಾಗಿ ನಿಂದ ನಿತ್ಯಮುಕ್ತರೆ
ನಿರವಯಪ್ರಭು ಮಹಾಂತಂಗೆ ಒಪ್ಪಿದ ಶರಣಗಣವೆಂಬೆ ಕಾಣಾ
ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.