Index   ವಚನ - 21    Search  
 
ಹರಹರ ಶಿವಶಿವ ಜಯಜಯ ನಮೋ ನಮೋ ತ್ರಾಹಿ ತ್ರಾಹಿ ಕರುಣಾಕರ ಅಭಯಕರ ಸುಧಾಕರ ಚಿದಾಕರ ಮತ್ಪ್ರಾಣನಾಥ ಸರ್ವಾಧಾರ ಸರ್ವಚೈತನ್ಯಮೂರ್ತಿ ಶ್ರೀಗುರುಲಿಂಗಜಂಗಮವೆ, ನಿಮ್ಮ ಘನಪಾದಪೂಜೆಯ ಮಾಡುವುದಕ್ಕೆ ನಿರೂಪವ ಪಾಲಿಸಬೇಕು ಸ್ವಾಮಿಯೆಂದು ಕೃಪಾನಂದವ ಬೆಸಗೊಂಡು, ಸಮ್ಮುಖದ ಗರ್ದುಗೆಯಲ್ಲಿ ಮೂರ್ತವಮಾಡಿ, ನಿಜಾನಂದದಿಂದ ಕ್ರಿಯಾಜಂಗಮಮೂರ್ತಿಯ ಕರಕಮಲದಲ್ಲಿ ನೆಲಸಿರುವ ಪರಾತ್ಪರ ಜ್ಞಾನಜಂಗಮಲಿಂಗಮೂರ್ತಿಯ ಷಟ್ಕೃತಿ ನವಕೃತಿಗಳಲ್ಲಿ ಅನಾದಿಜ್ಯೋತಿರ್ಮಯ ಮಹಾಪ್ರಣಮಲಿಂಗಂಗಳ ಅನಿಮಿಷದೃಷ್ಟಿಯಿಂ ನಿರೀಕ್ಷಿಸಿ ಧ್ಯಾನವಿಟ್ಟು, ಸಾಕಾರ ನಿರಾಕಾರ ಅಷ್ಟವಿಧಾರ್ಚನೆ ಷೋಡಶೋಪಚಾರಗಳ ಗಣಸಮೂಹವನೊಡಗೂಡಿ, ಘನಮನೋಲ್ಲಾಸದಿಂದ ಸಮಾಪ್ತವ ಮಾಡಿ ನಮಸ್ಕರಿಸಿ, ಇದೆ ನಿಃಕಳಂಕ ಸದ್ರೂಪ ಘನಗುರುಮೂರ್ತಿ ಇಷ್ಟಲಿಂಗಾರ್ಚನ ಎಂದು ಭಾವಭರಿತವಾಗಿ, ಎಲೆಗಳೆದ ವೃಕ್ಷದಂತೆ ಕರಣಂಗಳುಲುವಿಲ್ಲದೆ ನಿಂದ ನಿಜೋತ್ತಮರೆ ನಿರವಯಪ್ರಭು ಮಹಾಂತರೆಂಬೆ ಕಾಣಾ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.