Index   ವಚನ - 22    Search  
 
ತನ್ನ ವಾಮಕರದಂಗುಲಮಧ್ಯದಲ್ಲಿ ಷಡಕ್ಷರಂಗಳ ಲಿಖಿತಂಗೈದು, ಸೂಕ್ಷ್ಮದಿಂದರ್ಚಿಸಿ, ತನ್ಮ ಹೃನ್ಮಂದಿರಾಲಯದಲ್ಲಿ ನೆಲೆಸಿರುವ ಜ್ಯೋತಿರ್ಮಯ ಇಷ್ಟಮಹಾಲಿಂಗಮಂ ನಿರೀಕ್ಷಿಸಿ, ಆ ಪರಮಜಂಗಮಲಿಂಗದೇವನ ಚರಣಾಂಗುಷ್ಠಗಳ ತನ್ನ ವಾಮಕರಸ್ಥಲದಲ್ಲಿ ಸತ್ತುಚಿತ್ತಾನಂದನಿತ್ಯಪರಿಪೂರ್ಣ ಅವಿರಳಪರಂಜ್ಯೋತಿಸ್ವರೂಪವಾದ ಪ್ರಾಣಲಿಂಗವೆಂದು ಭಾವಿಸಿ, ಪರಮಾನಂದಾಬ್ಧಿಕರಣಜಲದಿಂ ಗಂಧಾಕ್ಷತೆ ಪುಷ್ಪ ಪತ್ರಿ ಮೊದಲಾದ ಉಪಚಾರ ಮಾಡಬೇಕಾದರೆ ಲಿಂಗಕ್ಕೆ ತೋರಿ ತೋರಿ ಪಾದಕ್ಕೆ ಅರ್ಪಿಸಲಾಗದು, ಅದೇನುಕಾರಣವೆಂದರೆ : ಆ ಪಾದವೆ ನಿರಂಜನಜಂಗಮವಾದ ಕಾರಣ, ಆ ಭಕ್ತನು ಜಂಗಮಪ್ರಸಾದವ ಶೂನ್ಯಲಿಂಗದ ಇಷ್ಟಬ್ರಹ್ಮಮೂರ್ತಿಗೆ ಸಮರ್ಪಿಸಿ, ಆ ಇಷ್ಟಬ್ರಹ್ಮದಿಂದುಳುಮೆಯಾದ ಲಿಂಗಪ್ರಸಾದವನ್ನು ನಿಃಕಳಂಕಗುರುದೇವನಾದ ಪ್ರಾಣಕಳಾಚೈತನ್ಯ ಅನಿಮಿಷಾರಾಧ್ಯ ಶ್ರೀಗುರುಮೂರ್ತಿಗೆ ಸಮರ್ಪಿಸಿ, ಆ ನಿರಂಜನ ಜಂಗಮಲಿಂಗ ಆ ನಿಶ್ಶೂನ್ಯ ಜಂಗಮಲಿಂಗದಿಂದಾದುಳುಮೆಯಾದ ಪರಮಾನಂದಪ್ರಸಾದವ, ಆ ಶೂನ್ಯಲಿಂಗವ ಕರಸ್ಥಲದಲ್ಲಿ, ಆ ನಿರಂಜನಜಂಗಮವ ಕಂಗಳಾಲಯದಲ್ಲಿ, ಮಿಶ್ರಮಿಶ್ರಂಗಳೊಡನೆ ಸಂಬಂಧಾಚರಣೆಗಳಿಂದ, ಚಿದ್ರೂಪ ಚಿದ್ರುಚಿಗಳ ಸಂತೃಪ್ತಿಗಳೊಳ್ ಲೋಲುಪ್ತನಾದ ನಿಃಕಲಬ್ರಹ್ಮ ಪರಮಗುರುಲಿಂಗಸ್ವಾಮಿಗೆ ಸಮರ್ಪಿಸಿ, ಆ ನಿರಂಜನ ನಿಶ್ಶೂನ್ಯ ನಿಃಕಳಂಕ ಗುರುಲಿಂಗಜಂಗಮದ ನಿಜಚಿನ್ಮಯ ಚಿತ್ಕಲಾಪ್ರಸಾದವೆ ಒಬ್ಬುಳಿಯಾಗಿ ಶರಣಸತಿ ಲಿಂಗಪತಿಯೆಂಬ ಉಭಯವೇಕಸಮರಸದಿಂದ ಪರಿಣಾಮಕ್ಕೆ ಪರಿಪೂರ್ಣಪ್ರಸಾದಕ್ಕೆ ಪರಿಪೂರ್ಣಪ್ರಸಾದವ ಜಂಗಮಲಿಂಗ ಲಿಂಗಶರಣನೆಂಬ ಸ್ವಾನುಭಾವಸೂತ್ರವಿಡಿದು, ತನ್ನ ತಾನರ್ಚಿಸಿ, ತ್ರಿವಿಧಲಿಂಗದೊಳಗೆ ನವಲಿಂಗವ ಹುದುಗಿಸಿ, ಇದೆ ನಿಶ್ಶೂನ್ಯ ಚಿದ್ರೂಪ ಘನಲಿಂಗಮೂರ್ತಿ ಪ್ರಾಣಲಿಂಗಾರ್ಚನೆಯೆಂದು ಪರಿಪೂರ್ಣಾನುಭಾವಭರಿತವಾಗಿ, ಸುಟ್ಟ ಸರವೆಯಂತೆ ಜೀವನವರ್ತನೆಗಳಿಲ್ಲದೆ ಮಂಗಳಾರತಿಗಳೆತ್ತಿ, ಘನಸಮ್ಮೇಳವೆಲ್ಲ ಸ್ತೋತ್ರಗಳಿಂದ ನಾದ ಘೋಷಂಗೈದು ತ್ರಿವಿಧಜಪಮಂ ಮಾಡಿ, ಪುಷ್ಪಾಂಜಳಿಗಳಿಂದ ಪ್ರದಕ್ಷಿಣದೊಳ್ ನಮಸ್ಕಾರವಂ ಮಾಡಿ ಚಿದ್ಬೆಳಗಿನೊಳ್ ಮಹಾಬೆಳಗಗೂಡಿ ಎರಡಳಿದೊಂದಾಗಿರಬಲ್ಲರೆ ನಿರವಯಪ್ರಭು ಮಹಾಂತರು ತಾವೇ ಕಾಣಾ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.