Index   ವಚನ - 31    Search  
 
ಅಂತೊಪ್ಪುವ ಸಚ್ಚಿದಾನಂದ ಧ್ಯಾನದಿಂದ, ನಿಮ್ಮ ಪರಿಪೂರ್ಣ ಪ್ರಸಾದೋದಕಕ್ಕೆ ನಿರೂಪವ ಪಾಲಿಸಬೇಕು ಸ್ವಾಮಿ ಎಂದು ಬೇಡಿಕೊಂಡು ಅಭಯವಾದ ಮೇಲೆ ಬಂದು ಮೊದಲಹಾಗೆ ಅಲ್ಲಿ ಮೂರ್ತವ ಮಾಡಿ, ಆ ಜಂಗಮಮೂರ್ತಿಗಳು ಸಲಿಸಿದೋಪಾದಿಯಲ್ಲಿ ಅನಾದಿಮೂಲಮಂತ್ರಸೂತ್ರವಿಡಿದು ತಾನು ಸಲಿಸುವುದು. ಆ ಮೇಲೆ, ಅಚ್ಚಪ್ರಸಾದಿ ನಿಚ್ಚಪ್ರಸಾದಿ ಸಮಯಪ್ರಸಾದಿ ಚಿತ್ಕಲಾಪ್ರಸಾದಿ ಮೊದಲಾದ ಷಟ್ಸ್ಥಲ ಭಕ್ತ ಮಹೇಶ್ವರರು, ಅದೇ ರೀತಿಯಲ್ಲಿ ಸಲಿಸುವುದು ಪೂರ್ವಪುರಾತನೋಕ್ತವು. ಉಳಿದ ತ್ರಿವಿಧ ದೀಕ್ಷೆಗಳರಿಯದೆ, ಕ್ರಿಯಾಪ್ರಸಾದದ ಕುರುಹ ಕಾಣದೆ, ಷಟ್ಸ್ಥಲಮಾರ್ಗವರಿಯದೆ, ಇಷ್ಟಲಿಂಗಧಾರಕ ಉಪಾಧಿಗಳು ಆ ಗದ್ದುಗೆಯ ತೆಗೆದು, ಲಿಂಗಕ್ಕರ್ಪಿಸಿಕೊಳ್ಳಬೇಕಲ್ಲದೆ ಬಟ್ಟಲೆತ್ತಲಾಗದು. ಅದೇನು ಕಾರಣವೆಂದಡೆ: ಅವರಿಗೆ ತ್ರಿವಿಧದೀಕ್ಷಾನುಗ್ರಹ ಪ್ರಸನ್ನಪ್ರಸಾದ ಷಟ್ಸ್ಥಲಮಾರ್ಗ ಸರ್ವಾಚಾರಸಂಪತ್ತಿನ ಆಚರಣೆ ಮುಂದಿಹುದರಿಂದ ಅವರು ಬಟ್ಟಲ ಎತ್ತಲಾಗದು. ಹೀಂಗೆ ಸರ್ವರು ಸಲಿಸಿದ ಮೇಲೆ ಕೊಟ್ಟ ಕೊಂಡ ಭಕ್ತ ಜಂಗಮವು ಇರ್ವರೂ ಕೂಡಿ, ಅನಾದಿ ಮೂಲಮಂತ್ರಸೂತ್ರವಿಡಿದು, ಮುಕ್ತಾಯವ ಮಾಡಿದಲ್ಲಿಗೆ ದಶವಿಧಲಿಂಗಸಂಬಂಧದಿಂದ ದಶವಿಧಪಾದೋದಕ ಲಿಂಗೋದಕ ಪ್ರಸಾದೋದಕಂಗಳಲ್ಲಿ ಪರಿಪೂರ್ಣತೃಪ್ತರೆ ನಿಮ್ಮ ಪ್ರತಿಬಿಂಬರಯ್ಯ ನಿರವಯಪ್ರಭು ಮಹಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.