Index   ವಚನ - 32    Search  
 
ಶಿವಶರಣಗಣಾರಾಧ್ಯರು ನಿರಾಕಾರ ಚಿತ್ಪಾದೋದಕದಾಚರಣೆಯ ಮಾರ್ಗಕ್ರಿಯೆ ಮುಗಿದ ಮೇಲೆ, ಸಾಕಾರಚಿತ್ಪ್ರಸಾದವ ಆ ಪಾದತೀರ್ಥದಾಚರಣೆಯಂತೆ ತಟ್ಟಿ, ಬಟ್ಟಲಗಳೊಳ್ ಪರಿಪೂರ್ಣತೃಪ್ತಿಯನೈದುವುದು. ಆ ನಿಲುಕಡೆಯೆಂತೆಂದೊಡೆ: ನಿರಾಭಾರಿವೀರಶೈವಸಂಪನ್ನ ಸದ್ಭಕ್ತ ಜಂಗಮಮೂರ್ತಿಗಳು ಪಾದೋದಕದಿಂದ ಅವರ ಭಾಂಡಕ್ಕೆ ಹಸ್ತಸ್ಪರಿಶನವ ಮಾಡುವುದು. ಉಳಿದ ವಿಶೇಷ ವೀರಶೈವಸನ್ಮಾರ್ಗಿ ಭಕ್ತಜಂಗಮವು ತಮ್ಮ ತಮ್ಮ ತಂಬಿಗೆ ತಟ್ಟೆ ಬಟ್ಟಲಿಗೆ ಪಾದೋದಕ ಹಸ್ತಸ್ಪರಿಶನವ ಮಾಡಿ, ಕೇವಲಪರಮಾನಂದದ ಚಿದ್ಗರ್ಭೋದಯ ಶುದ್ಧಪ್ರಸಾದವೆಂದು ಭಾವಿಸಿ, ಅತಿವಿಶೇಷ ಮಹಾಸುಯ್ದಾನದಿಂದ ಸಮಸ್ತ ಜಂಗಮ ಭಕ್ತ ಮಹೇಶ್ವರ ಶರಣಗಣಾರಾಧ್ಯರಿಗೆ ಎಡೆಮಾಡಿ, ಅಷ್ಟಾಂಗ ಹೊಂದಿ, ಎಡಬಲ ಗಣತಿಂತಿಣಿಯ ಪೂರ್ಣಾನಂದದ ನಿಜದೃಷ್ಟಿಯಿಂ ನೋಡಿ, ನಿರೀಕ್ಷಿಸಿ, ಶರಣಾರ್ಥಿ ಸ್ವಾಮಿ, ನಿಮ್ಮ ದಯದಿಂದುದಯವಾದ ಪರಿಪೂರ್ಣರಸಾಮೃತವ ಮಹಾಲಿಂಗಾರ್ಪಣವ ಮಾಡಬೇಕೆಂದು ಅಭಿವಂದಿಸಿ, ಪರಮಪತಿವ್ರತತ್ವದಿಂದ ಗುರುಚರವರಸ್ಥಲಕ್ಕೆ ತನುಮನಧನಂಗಳ ಸಮರ್ಪಿಸುವಲ್ಲಿ ನಿರ್ವಂಚಕವಾಗಿ, ಭಕ್ತಲಿಂಗಜಂಗಮವೆಂದು ಉಭಯ ನಾಮರೂಪ ಕ್ರಿಯಾಕಾಯವಳಿದು, ಕ್ಷೀರ ಕ್ಷೀರವ ಕೂಡಿದಂತೆ ಪರುಷ ಮುಟ್ಟಿ ಪರುಷವಾದಂತೆ, ಪರಮಾನಂದಾಬ್ಧಿ ಚಿದ್ರಸಾಮೃತ ಅಷ್ಟಾವರಣದ ಸತ್ಕ್ರಿಯಾಜ್ಞಾನಾಚಾರಂಗಳ ಅನುಭಾವದೊಳ್ ಕೂಟಸ್ಥದಿಂದೊಡಲಾಗಿ, ನಿರಾಕಾರ ನಿಃಶಬ್ದಲೀಲೆಪರ್ಯಂತರವು ಆ ಗುರುಲಿಂಗಜಂಗಮ ಚಿತ್ಪ್ರಭಾಂಗ ಭಸ್ಮಮಂತ್ರಾದಿಗಳೆ ಮುಂದಾಗಿ, ಸತ್ಯಶುದ್ಧ ನಡೆನುಡಿ ಕ್ರಿಯಾಜ್ಞಾನಾನುಭಾವ ಪಾದೋದಕ ಪ್ರಸಾದಸೇವನೆಯೆ ಹಿಂದಾಗಿ, ಸಮಸ್ತ ಕಾರಣಕ್ಕೂ ಸಾವಧಾನ ಸಪ್ತವಿಧ ಸದ್ಭಕ್ತಿಗಳಿಂದ ಮಾರ್ಗಾಚಾರವುಳ್ಳ ಕ್ರಿಯಾರ್ಪಣ, ದ್ರವ್ಯಮೀರಿದಾಚಾರವುಳ್ಳ ಜ್ಞಾನಾರ್ಪಣದ್ರವ್ಯಂಗಳಂ ಪರಿಪೂರ್ಣಾನುಭಾವದಿಂದ ನಿಜನೈಷ್ಠಾನುಭಾವಸಂಬಂಧಿಗಳೆ ಅಚ್ಚಪ್ರಸಾದಿ ನಿಚ್ಚಪ್ರಸಾದಿ ಸಮಯಪ್ರಸಾದಿ ಚಿತ್ಕಲಾಪ್ರಸಾದಿ ಸೇವಿತಕ್ಕೆ ಯೋಗ್ಯರಾದ ಘನಕ್ಕೆ ಘನವೆಂದವರಾಳಿನಾಳಾಗಿರ್ಪೆ ಕಾಣಾ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.