Index   ವಚನ - 33    Search  
 
ಘನಕ್ಕೆ ಮಹಾಘನಗಂಭೀರ ಭಕ್ತ ಮಹೇಶ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯ ಸನ್ಮಾನಿತರು, ನಿರವಯವಸ್ತುವಿನ ಪ್ರತಿಬಿಂಬರಾಗಿ, ತಮ್ಮ ತಾವರಿದು. ಚತುರ್ವಿಧ ವಿಸರ್ಜನೆಯನರಿದಾಚರಿಸುವುದು. ಆ ವಿಸರ್ಜನೆಗಳಾವಾವೆಂದಡೆ: ಮಲಮೂತ್ರವೆರಡನು ವಿಸರ್ಜನೆಯಿಂದ ಬಿಡುವಂಥದೆ ಸ್ಥೂಲಾಚಮನವೆನಿಸುವುದು. ಕ್ರೀಡಾವಿಲಾಸದಿಂದ ತಮ್ಮರ್ಧಾಂಗವೆಂದು ಭಕ್ತಗಣಸಾಕ್ಷಿಯಾಗಿ ವಿರಾಜಿಸುವಂಥ ಕ್ರಿಯಾಂಗನೆಯಲ್ಲಿ ವೀರ್ಯವ ಬಿಡುವಂಥಾದ್ದೊಂದು ಸ್ಥೂಲಾಚಮನವೆನಿಸುವುದು. ಈ ಸ್ಥೂಲಾಚಮನಗಳ ಮಾಡಿದ ವೇಳೆಯಲ್ಲಿ ದಂತಗಳ್ಮೂವತ್ತೆರಡನು ತೀಡಿ, ಲಿಂಗಾಂಗ ಮಜ್ಜನಂಗೈದು, ಸರ್ವೋಪಚಾರಂಗಳಿಂ ಕ್ರಿಯಾಜಪ ಜ್ಞಾನಜಪ ಮಹಾಜ್ಞಾನಜಪ ಪರಿಪೂರ್ಣಾನುಭಾವಜಪಂಗಳೊಳ್ ಲಿಂಗಜಂಗಮ ಜಂಗಮಲಿಂಗಾರ್ಪಣವ ಮಾಡುವುದು. ಶಿವಶರಣಗಣಾರಾಧ್ಯರು ಲಿಂಗಾಭಿಷೇಕ ಅರ್ಚನಾದಿಗಳ ಮಾಡಿ, ಅರ್ಪಣ ಸಂಧಿನಲ್ಲಿ ಜಲತೋರಿಕೆಯಾಗಿ ವಿಸರ್ಜಿಸಿ, ಉದಕವ ಬಳಸಿದ ವೇಳೆಯೊಳು, ಲಿಂಗಬಾಹ್ಯರಸಂಗಡ ಪ್ರಸಂಗಿಸಿದರೂ ದೀಕ್ಷಾಜಲದಿಂದ ಆರುವೇಳೆ ಲಿಂಗಸ್ಪರಿಶನದಿಂದ ಜಿಹ್ವೆಯ ಪ್ರಕ್ಷಾಲಿಸಿ, ಮುಖ ಮಜ್ಜನವಮಾಡಿ, ಲಿಂಗಾರ್ಚನಾರ್ಪಣವನುಭಾವಗಳ ಮಾಡುವುದು, ಇದು ಸೂಕ್ಷ್ಮಾಚಮನವೆನಿಸುವುದು. ಪ್ರಮಾಣಗಳಾದರೂ ಅನುವಲ್ಲದೆ ವಿಪತ್ತಿನ ವೇಳೆಯಾಗಲಿ, ಜಲ ಪರಿಹರಿಸಿದಲ್ಲಿ ಪರಿಣಾಮಜಲದಿಂದ ಆ ಸ್ಥಾನವ ಪ್ರಕ್ಷಾಲಿಸಿ, ಹಸ್ತಪಾದವ ತೊಳೆದು ಉದಕವ ಶೋಧಿಸಿ, ಲಿಂಗಸ್ಪರಿಶನವಗೈದು, ಆರುವೇಳೆ ಜಿಹ್ವೆಯ ಪ್ರಕ್ಷಾಲಿಸಿ, ಸತ್ಯೋದಕದ ಪರಮಾನಂದಜಲ ಮಹಾಜ್ಞಾನಪ್ರಣಮಪ್ರಸಾದಂಗಳ ಗುಟುಕ ಲಿಂಗಮಂತ್ರ ನೆನಹಿನೊಡನೆ ಸೇವಿಸುವುದು. ಲಿಂಗಬಾಹ್ಯರ ಸಂಗಡಪ್ರಸಂಗಿಸಿದೊಡೆ ಇದೇ ರೀತಿಯಲ್ಲಿ ಮುಖಪ್ರಕ್ಷಾಲನಂಗೈದು ಆಚರಿಸುವುದು. ಇದಕೂ ಮೀರಿದರೆ ಜಲಬಿಟ್ಟು, ಭವಿಗಳಸಂಗಡ ಪ್ರಸಂಗವ ಮಾಡಿದರೆ ಆ ಸಮಯದಲ್ಲಿ ಪ್ರಮಾದವಶದಿಂದ ಉದಕವು ದೊರೆಯದಿದ್ದರೆ ಅಲ್ಲಿ ವಿಸರ್ಜನಸ್ಥಾನವ ದ್ರವವಾರುವಂತೆ ಶುಚಿಯುಳ್ಳ ಮೃತ್ತಿಕೆ ಪಾಷಾಣ ಕಾಷ್ಠ ಕಾಡುಕುರುಳು ಪರ್ಣಗಳಿಂದ ಪ್ರಕ್ಷಾಲನಂಗೈದು, ಜಿಹ್ವಾಗ್ರದಲ್ಲಿ ಸಂಬಂಧವಾದ ಗುರುಲಿಂಗೋದಕದಿಂದ ಮತ್ತಾ ಜಿಹ್ವೆಯ ಪ್ರಕ್ಷಾಲಿಸಿ, ಆರುವೇಳೆ ತೂವರಂಗೈದು, ಹರಹರ ಶಿವಶಿವ ಜಯಜಯ ಕರುಣಾಕರ ಮತ್ಪ್ರಾಣನಾಥ ಶ್ರೀಗುರುಬಸವಲಿಂಗಾಯೆಂದು ಘನಮನವ ಚಿದ್ಘನಲಿಂಗಪ್ರಸನ್ನಧ್ಯಾನದಿಂದ ನವನಾಳವೆಂಬ ಕವಾಟಬಂಧನಂಗೈದು, ಪ್ರದಕ್ಷಣವಮಾಡಿ, ಪರಿಪೂರ್ಣ ಚಿದ್ಬೆಳಗಿನೊಳು ಮತ್ತೆಂದಿನಂತೆ ಅತಿಜಾಗ್ರವೆಂಬ ಮಹಾದರುವಿನೊಳ್ ಸತ್ಕೃತ್ಯ ಸದ್ಧರ್ಮರಾಗಿರ್ಪುದು. ಮುಂದೆ ಲಿಂಗಾರ್ಚನಾರ್ಪಣಗಳ ಮಾಡಬೇಕಾದರೆ, ಶುದ್ಧೋದಕದಿಂದ ಲಿಂಗಾಭಿಷೇಕಸ್ನಾನಂಗೈದು, ಪಾವುಡಗಳ ಮಡಿಮಾಡಿ ಪರಿಣಾಮಾರ್ಪಣ ತೃಪ್ತರಾಗಿರ್ಪುದು. ಇದಕೂ ಮೀರಿದರೆ, ಜಲವ ಬಿಡುವುದು, ಭವಿಗಳಸಂಗಡ ಪ್ರಸಂಗಿಸಿದರೆ ಸ್ನಾನಮಾಡುವ ಪರಿಯಂತರ ಜಿಹ್ವಾಗ್ರದಲ್ಲಿ ಸ್ಥಾಪ್ಯವಾದ ಸತ್ಯಶುದ್ಧ ಗುರುಲಿಂಗೋದಕ ಮಹಾಪ್ರಣಮಪ್ರಸಾದವೆ ಮೊದಲು ಕ್ರಿಯಾಘನ ಗುರುಲಿಂಗಜಂಗಮಾರ್ಚನೆ ತೀರ್ಥಪ್ರಸಾದಸೇವನೆಗಳಂ ಮಾಡಲಾಗದು. ಇದಕೂ ಮೀರಿದರೆ, ತನ್ನ ದೀಕ್ಷಾಗುರು ಶಿಕ್ಷಾಗುರು ಮೋಕ್ಷಾಗುರು ಪರಿಪೂರ್ಣಗುರುಸ್ಮರಣೆ ಧ್ಯಾನದಿಂದ ಸರ್ವಾವಸ್ಥೆಗಳ ನೀಗಿ, ಮಹಾಬಯಲ ಬೆರೆವುದು. ಇದಕೂ ಮೀರಿದರೆ, ತನುವಿಗೆ ಆಯಸದೋರಿ, ಆಪ್ತರಾರೂ ಇಲ್ಲದಂತೆ, ಪರಿಣಾಮಜಲ ದೊರೆಯದ ವೇಳೆಯೊಳು ಮಲಮೂತ್ರಗಳೆರಡೂ ತೋರಿಕೆಯಾದರೆ, ಎಲ್ಲಿ ಪರಿಯಂತರ ಸಂಶಯಗಳುಂಟೊ ಅಲ್ಲಿ ಪರಿಯಂತರವು ಎರಡನೂ ವಿಸರ್ಜಿಸುವುದು. ಆ ಸಂಶಯ ತೀರಿದಲ್ಲಿ ಉದಕವಿದ್ದಲ್ಲಿಗೆ ಹೋಗಿ, ಪೂರ್ವದಂತೆ ಮೃತ್ತಿಕಾಶೌಚಗಳ ಬಳಸಿ, ನಿರ್ಮಲವಾಗಿ ತೊಳೆದು, ಹಸ್ತಪಾದಗಳ ಪ್ರಕ್ಷಾಲಿಸಿ, ಆ ಸಮಯದಲ್ಲಿ ಕ್ರಿಯಾಭಸಿತವಿದ್ದರೂ ರಸಯುಕ್ತವಾದ ಪದಾರ್ಥವಾದರೂ ಪುಷ್ಪಪತ್ರಿಗಳಾದರೂ ಇದ್ದರೆ ಸತ್ಕ್ರಿಯಾಲಿಂಗಾರ್ಚನಾರ್ಪಣಗಳಿಗೆ ಬಾರವು. ಆದ್ದರಿಂದ ಅವು ಇದ್ದವು ನಿಕ್ಷೇಪವ ಮಾಡುವುದು. ಕ್ರಿಯಾಗುರು ಲಿಂಗಜಂಗಮಮುಖದಿಂದ ಶುದ್ಧೋದಕವ ಮಾಡಿ, ತ್ರಿವಿಧ ಸ್ನಾನಂಗೈದು, ಪುರಾತನೋಕ್ತಿಯಿಂದ ಜಂಗಮಲಿಂಗದಲ್ಲಿ ಚಿದ್ಭಸಿತವ ಬೆಸಗೊಂಡು, ಸತ್ಕ್ರಿಯಾರ್ಪಣಗಳನಾಚರಿಸಿ, ನಿತ್ಯಮುಕ್ತರಾಗಿರ್ಪವರೆ ಪೂರ್ವಾಚಾರ್ಯಸಗುಣಾನಂದಮೂರ್ತಿಗಳೆಂಬೆ ಕಾಣಾ ನಿರವಯಪ್ರಭು ಮಹಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.