Index   ವಚನ - 34    Search  
 
ಪಾವನಾರ್ಥವಾಗಿ ಮಹದರುವೆಂಬ ಶ್ರೀಗುರುಕರಕಮಲೋದಯದಿಂದ ಚಿದ್ಘನಲಿಂಗಮಂ ಧರಿಸಿ, ಲಿಂಗಭಕ್ತ ಭಕ್ತಲಿಂಗ ಲಿಂಗಜಂಗಮ ಜಂಗಮಲಿಂಗವೆಂಬುಭಯಲೀಲೆಗಳಿಂದ ಸರ್ವಾಚಾರಸಂಪದವೆಂಬ ಷಡುಸ್ಥಲಮಾರ್ಗವನೊಡಗೂಡಿ, ನಿರಾಭಾರಿವೀರಶೈವ ಸತ್ಕ್ರಿಯೆ ಸಮ್ಯಜ್ಞಾನಾನುಭಾವ ಸದಾಚಾರ ನಡೆನುಡಿ ಭಿನ್ನವಾಗದಂತೆ, ತಮ್ಮ ತನುಮನಪ್ರಾಣಾನುಭಾವಂಗಳಿಗೆ ಗಣಾಚಾರ ಶರಣ ಸಾಕ್ಷಿಯಾಗಿ, ಘನಮಾರ್ಗವ ಬಿಟ್ಟಾಚರಿಸಿದೊಡೆ ಭವಬಂಧನ ಬಿಡದು, ತದನಂತರ ನರಕ ತಪ್ಪದು. ಅದು ಕಾರಣದಿಂದ ಮಹದರುವೆಂಬ ಪಾವುಡವ ಕೈಕೊಂಡು, ಪ್ರಸನ್ನಪ್ರಸಾದ ಷಟ್‍ಸ್ಥಲವರ್ಮದಿ ವರ್ಮವ ಮೆರೆದು, ದುಷ್ಕೃತ್ಯದಲ್ಲಿ ಹೋಗುವುದ ಕಂಡು ಆಪ್ತರಾದ ಗಣಾರಾಧ್ಯರ ಹರಗುರೋಕ್ತಿಯಿಂ, ನಡೆಯಲ್ಲದ ನಡೆ, ನುಡಿಯಲ್ಲದ ನುಡಿಗಳ ಬಳಸಿ, ಜನ್ಮ ಜರೆ ಮರಣಗಳೊಳ್ ತೊಳಲಿ ತೊಳಲಿ ಭವಕ್ಕೆ ಬೀಳುವಂಥ ಅಜ್ಞಾನಮರವೆಯ ವಿಡಂಬಿಸಿ, ತನುಮನಪ್ರಾಣಭಾವಂಗಳ ಹೊಡೆಹೊಡೆದು, ಪ್ರತಿಜ್ಞೆ ಪ್ರಮಾಣಗಳೊಳ್ ಬಾಹ್ಯಾಂತರಂಗದಲ್ಲಿ ಪರಿಪಕ್ವವ ಮಾಡಬಲ್ಲ ಮಹಾಜ್ಞಾನಿಗಳೆ ಪರಮಪವಿತ್ರರೆಂಬೆ ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.