Index   ವಚನ - 35    Search  
 
ಸಚ್ಚಿದಾನಂದ ಬ್ರಹ್ಮೋಪದೇಶ ಭಕ್ತಮಹೇಶ್ವರರು ಪರಮಪಾತಕಸೂತಕಂಗಳ ಬಾಹ್ಯಾಂತರಂಗದಲ್ಲಿ ಹೊದ್ದದೆ, ಸತ್ಯಶರಣರು ಮಾಡುಂಡುದೊಂದು ಕಾಯಕ, ಬೇಡುಂಡುದೊಂದು ಕಾಯಕದಿಂದ ಗಳಿಸಿದಂಥ ಪದಾರ್ಥಗಳ, ಗುರುಚರಪರಸ್ಥಿರಕ್ಕೆ ಷಟ್‍ಸ್ಥಲಸಂಬಂಧಗಳಿಂದ, ಷಡ್ವಿಧಮಂತ್ರಗಳ ಸೊಮ್ಮಿನಿಂ ಸಂತೃಪ್ತರಾಗಿರ್ಪುದು. ಆ ನಿಲುಕಡೆಯೆಂತೆಂದಡೆ: ಶ್ರುತಿಗುರುಸ್ವಾನುಭವ ಸಾಕ್ಷಿಯಾಗಿ, ಶ್ರೀಗುರುಲಿಂಗಜಂಗಮವೆ ಪರಾತ್ಪರವೆಂದು ಕಂಡು, ಷಡುಸ್ಥಲಮಾರ್ಗವಿಡಿದು, ತನ್ನ ನಿಜವ ತಾನರಿಯದೆ, ಭವಿಶೈವ ಭಿನ್ನ ಕರ್ಮಿಗಳಂತೆ ಭಾವಭ್ರಮೆಗೆಟ್ಟು, ಹೊಲಬುದಪ್ಪಿ, ಭೋಗಾಪೇಕ್ಷಿತರಾಗಿ, ಹಲವು ಶಾಸ್ತ್ರೋಪದೇಶವಿಡಿದು, ಕಾಶಿ ರಾಮೇಶ್ವರ ಕಂಚಿ ಕಾಳಹಸ್ತಿ ಪಂಪಾಕ್ಷೇತ್ರ ಗೋಕರ್ಣ ಶ್ರೀಶೈಲಾದಿಯಾದ ತೀರ್ಥಯಾತ್ರೆ, ವೀರಣ್ಣ ಬಸವಣ್ಣ ಮಲ್ಲಣ್ಣ ಹಾವಿಗೆ ದಂಡಾಗ್ರ ಗಿಳಿಲು ಶಂಖ ಭಸ್ಮಗುಂಟಿಕೆ ತೀರ್ಥದಗುಂಬ ಹಾದಿಬೆನವ ಹಳ್ಳದ ಬೆನವ ವಾಸರದಯ್ಯ ವಿನಾಯಕ ಶಕ್ತಿ ಗಣೇಶ ಚಂಡಿ ಚಾಮುಂಡಿಯಲ್ಲಿ ಏಕನಾತಿ ಹಿರಿಹೊಳೆ ಜಟ್ಟಿಂಗ ತೆಪ್ಪದಾರತಿ ಪಂಚಪಾಂಡವರು ಬನ್ನಿಮಹಾಂಕಾಳಿ ತುಳಸಿ ಬಿಲ್ವವೃಕ್ಷ ಸಮಾಧಿ ಗದ್ದುಗೆ ಪುರಾಣ ವಚನಾರ್ಥಪುಸ್ತಕ ಲೆಕ್ಕದ ಓಹಿ ಕತ್ತಿ ಕಂಡೇಪೂಜೆ, ಊರಬೀರ ಪೀರ ಗೋರಿ ಸತ್ತವರ ತಿಥಿ ಚಿತ್ತಹೊಲೆ ಕರ್ಮದ ಗಂಗೆ ಗುಗ್ಗುಳ ಗೌರೀನೋಂಪಿ ದೀಪಹರಕೆ ಪೂಜೆ ಕರಿಯಸೀರೆ ಊರ ಮಾರಿದೇವತೆ ಅಂಬಲಿ ಮಜ್ಜಿಗೆ ಕುಂಭ ಹೊಸ್ತಲ ಮದುವೆಯಕಂಭ ಕುಂಭ ಸರಕಿನಗಂಟು ಮಹತ್ವ ಮೆರೆದವರ ಪಾದಮುದ್ರೆ ಕಡೆಯಾದವಕ್ಕೆ, ತನ್ನ ಕಾಯ ವಾಚ ಮನದಲ್ಲಿ ಹೊಳೆದು, ಪಿತ-ಮಾತೆ ಸತಿ-ಸುತ ಒಡಹುಟ್ಟಿದವರು ಸೇವಕ ಕಡೆಯಾದವರಿಂದೆ ತನ್ನ ಮನೆಯಲ್ಲಿ ಮಾಡಿದ ಎಡೆ ವಾರಮೃತ್ಯೋದಕ, ಪಾದೋದಕಸಂಬಂಧವಾದ, ವಿಭೂತಿ-ಗಂಧಾಕ್ಷತೆ-ಪುಷ್ಪ-ಪತ್ರಿ ಧೂಪ-ದೀಪ ಹಣ್ಣು-ಕಾಯಿ ವಸ್ತ್ರಾಭರಣ-ಪಂಚಕಳಸ ಕಾಣಿಕೆ ಮೊದಲಾದ ಭಿನ್ನವ ಕರ್ಮಕ್ರಿಯಾಚಾರಲಿಂಗಬಾಹ್ಯರಾದ ಬ್ರಹ್ಮ ಕ್ಷತ್ರಿಯ ವೈಶ್ಯ ಶೂದ್ರ ಪಾಶುಪತ ಕಾಳಾಮುಖಿ ಯೋಗಿ-ಜೋಗಿ ಶ್ರವಣ-ಸನ್ಯಾಸಿ ಯತಿ-ವ್ರತಿ ಮನು-ಮುನಿ ಗರುಡ-ಗಂಧರ್ವ ಯಕ್ಷ-ರಾಕ್ಷಸ ಸಿದ್ಧ-ಸಾಧ್ಯರುಪದೇಶವಿಡಿದು ಚರಲಿಂಗೋದಯಘನಪಾದತೀರ್ಥವರ್ಪಿಸಿ, ನೈವೇದ್ಯ ಮಾಡಿಸುವಂಥಾದ್ದೆ ಅನಾಚಾರ. ಇದೇ ಭವಿಮಾಟಕೂಟ ಅಸತ್ಯದ ನಡೆನುಡಿಯ ವಿಚಾರದ ಪ್ರಥಮಪಾತಕ. ಇದಕ್ಕೆ ಹರನಿರೂಪ ಸಾಕ್ಷಿ: ಶಿವಾಚಾರಸುಸಂಪನ್ನಃ ಕೃತ್ವಾದನ್ಯದೈವಸ್ಯ ಪೂಜನಂ | ಶ್ವಾನಯೋನಿಶತಂ ಗತ್ವಾ ಚಾಂಡಾಲಗೃಹಮಾಚರೇತ್ || ಅನಾಚಾರಿಕೃತಂ ಪಾಕಂ ಲಿಂಗನೈವೇದ್ಯ ಕಿಲ್ಬಿಷಂ | ಲಿಂಗಾಚಾರಿಕೃತಂ ಪಾಕಂ ಲಿಂಗನೈವೇದ್ಯಮುತ್ತಮಂ || ತದ್ದಿನಂ ದಿನದೋಷೇಣ ಶೋಣಿತಂ ಸುರಾಮಾಂಸಯೋಃ | ಏಕಭುಕ್ತೋಪವಾಸೇನ ನರಕೇ ಕಾಲಮಕ್ಷಯಂ || ಸೌಮೇ ಭೌಮೇ ವ್ಯತಿಪಾತೇ ಸಂಕ್ರಾಂತಿಶಿವರಾತ್ರಿಯೋ | ಶೈವಕರ್ಮೋಪವಾಸಿನಾಂ ನರಕೇ ಕಾಲಮಕ್ಷಯಂ || ಕಾರ್ತೀಕಮಾಘಶ್ರಾವಣ ಶೈವಪೂಜಾವಿಶೇಷತಃ | ವೀರಶೈವಸ್ತಥಾ ಕೃತ್ವಾ ಸನ್ತಶ್ಟ ಪ್ರಾಕೃತೈಃ ಸಮಾಃ || ಸ್ಥಾವರಾರ್ಪಿತನೈವೇದ್ಯಾತ್ ನ ತೃಪ್ತಿರ್ಮಮ ಪಾರ್ವತಿ | ಜಂಗಮಾರ್ಪಿತನೈವೇದ್ಯಾತ್ ಮಮ ತೃಪ್ತಿಶ್ಚ ಸರ್ವದಾ || ಸತ್ಪಾತ್ರದತ್ತವಿತ್ತಸ್ಯ ತದ್ಧನಂ ಸ್ವಧನಂ ಸುಖಂ | ಅಪಾತ್ರದತ್ತ ವಿತ್ತಸ್ಯ ತದ್ಧನಂ ಸ್ವಸುಖಂ ಭವೇತ್ || ಚರಸ್ಯ ಗಮನೋ ನಾಸ್ತಿ ಭಕ್ತಸ್ಯ ಗೃಹಮಾಚರೇತ್ | ಅನ್ಯಗೃಹಂ ಗಮಿಷ್ಯಂತಿ ಸದ್ಯೋ ಗೋಮಾಂಸಭಕ್ಷಣಮ್ || ಇಷ್ಟಲಿಂಗಮವಿಶ್ವಸ್ಯ ಅನ್ಯದೈವಮುಪಾಸತೇ | ಶ್ವಾನಯೋನಿ ಶತಂ ಗತ್ವಾ ಚಾಂಡಾಲಗೃಹಮಾಚರೇತ್ || ಬಹುಲಿಂಗಪೂಜಕಸ್ಯ ಬಹುಭಾವಗುರುಸ್ತಥಾ | ಬಹುಪ್ರಸಾದಂ ಭುಂಜಂತಿ ವೇಶ್ಯಾಪುತ್ರಸ್ತಥೈವ ಚ || ಅಭಕ್ತಜನಸಂಗಶ್ಚ ಮಂತ್ರಸ್ಯ ಚ ಆಗಮಃ | ಅನ್ಯದೈವಪರಿತ್ಯಾಗಃ ಲಿಂಗಭಕ್ತಸ್ಯ ಲಕ್ಷಣಂ || ಲಿಂಗಧಾರಕಭಕ್ತಾನಾಂ ಲಿಂಗಬಾಹ್ಯಸತೀಸುತಾಃ | ಆಲಿಂಗಿತಾ ಚುಂಬಿತಾಶ್ಚ ರೌರವಂ ನರಕಂ ವ್ರಜೇತ್ || ಇಂತೆಂಬ ಹರಗುರುವಾಕ್ಯಪ್ರಮಾಣವದಾಗಿ, ಸದ್ಭಕ್ತಶರಣಗಣಾರಾಧ್ಯರು ಭೂಪ್ರತಿಷ್ಠಾದಿಗಳ ಹೊದ್ದಿದಡೆ, ಭವಬಂಧನವಪ್ಪದು ತಪ್ಪದು. ಅದು ಕಾರಣವಾಗಿ ಗುರುಮಾರ್ಗಿಕರು ಹೊದ್ದದೆ, ಭವಸಾಗರವ ದಾಂಟಿ, ನಿರ್ಧರದಿಂದಿಪ್ಪುದೊಂದು ನರಗುರಿಗಳ ಪ್ರಥಮಪಾತಕನಿರಸನ ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.