Index   ವಚನ - 36    Search  
 
ಪರಮಪವಿತ್ರ ಹರಗಣಸಾಕ್ಷಿಯಾಗಿ, ಸೂತ್ರ ಗೋತ್ರ ಪರಿಪೂಜ್ಯತ್ವವುಳ್ಳಂಥ ಕ್ರಿಯಾಶಕ್ತಿಯ ಸರ್ವೇಂದ್ರಿಮುಖದವಯವಂಗಳನು ಕೂನಗಳ ವಿಚಾರಕತ್ವದಿಂ ಘನಲಿಂಗಮೂರ್ತಿ ಶ್ರೀಗುರುವಿನ ಕರುಣಕಟಾಕ್ಷ ಶಿವದೀಕ್ಷೆಗಳಿಂದ ಪವಿತ್ರಕಾಯವೆನಿಸಿ, ಶಿವಧರ್ಮಾಂತರಾಳವೆಂಬ ದಂಡಕಮಂಡಲಗಳೆ ಕಂಭ ಕುಂಭ ಹಂದರ ಮುತ್ತೈದೆ ಬಾಸಿಂಗದೆ ಸಾಕ್ಷಿಯಾಗಿ, ಪಂಚಕಳಸ ಆರಾಧ್ಯಗಣಸಮೂಹವೆಲ್ಲ ಸಂತೋಷಂಗೈದು, ಇಷ್ಟಲಿಂಗವೆಂಬ ರಮಣಂಗೆ ಪ್ರಾಣಲಿಂಗವೆಂಬ ರಮಣಿಗೆ ಸುಹಸ್ತಗಳ ಕೂಡಿಸಿ, ಅರ್ಚಿಸಿ, ನವಸೂತ್ರವೆಂಬ ಕಂಕಣವ ಕಟ್ಟಿ, ಸ್ಥಿರಸೇಸೆಯನೆರೆದು, ಭಾವಭರಿತವಾಗಿ, ಸಮರಸಾಚರಣೆಗಳಿಂದ ಪರತತ್ವಲಿಂಗಲೋಲುಪ್ತರಾಗಿ, ಜಂಗಮಾರಾಧನೆ ದಾಸೋಹಂಭಾವದಿಂದ ಶಿವಯೋಗಸಂಪನ್ನರಾಗಿರಿಯೆಂದು ಅಭಯಕರವಿತ್ತು ಶರಣಮಹಾರುದ್ರ ಗಂಟೆಹೊಡೆದಂಥ ಕ್ರಿಯಾಶಕ್ತಿಗಳೆಷ್ಟಾದರೂ ರತಿವಿರತಿಗಳೊಳ್ ಬಳಸಿಬ್ರಹ್ಮವಾಗಿರ್ಪುದೆ ಸತ್ಯಸದ್ಧರ್ಮಿಗಳ ಸನ್ಮಾರ್ಗವು. ಈ ಸನ್ಮಾರ್ಗವನುಳಿದು, ವಿಷಯಾತುರ ಹೆಚ್ಚಿ, ಒಬ್ಬರು ಭೋಗಿಸಿದ ಎಂಜಲಸ್ತ್ರೀಯರ ಆಲಿಂಗಿಸಿ, ತನ್ನ ರಾಣಿಯೆಂದು ನುಡಿಗಣದಿಂದ ಭಾವಿಸುವುದೊಂದು ದುರಾಚಾರ. ಜಿಹ್ವೆಯಿಂದ ಮಾತುಮಾತಿಗೆ ಹೆಂಡತಿ ಅಕ್ಕ ಅವ್ವ ತಂಗಿಯೆಂದು ಬೊಗಳುವುದೊಂದು ದುರಾಚಾರ. ಪರಪುರಷಂಗೆ ರಾಣಿಯಾದ ಸ್ತ್ರೀಯಳ ಹಾವಭಾವ ವಿಲಾಸಗಳ ನೋಡಿ, ವಿಭ್ರಮಣೆಗೊಂಡು, ಅಂತರಂಗದಲ್ಲಿ ಕಳವಳಿಸಿ, ಹಾಸ್ಯರಹಸ್ಯವ ಮಾಡಬೇಕೆಂಬುದೊಂದು ದುರಾಚಾರ. ಇಂತು ತ್ರಿವಿಧರತಿಗಳಿಂದ ವರ್ತಿಸುವುದೆ ದ್ವಿತೀಯಪಾತಕ. ಇದಕ್ಕೆ ಹರನಿರೂಪ ಸಾಕ್ಷಿ: ಪರಸ್ತ್ರೀಣಾಂ ಚ ಸಂಸರ್ಗಾತ್ ಮೋಕ್ಷೋ ನಾಸ್ತಿ ವರಾನನೇ | ಜಪಹಾನಿಃ ತಪೋಹಾನಿಃ ರೌರವಂ ನರಕಂ ವ್ರಜೇತ್ ||'' ಹರಿಣಪಾದಮಾತ್ರೇಣ ಬಂಧಿತಂ ಚ ಜಗತ್ರಯಂ | ತತ್ಸುಖಂ ಬಿಂದುಮಾತ್ರೇಣ ದುಃಖಂ ಪರ್ವತಮೇವ ಚ || ಇಂತೆಂಬ ಹರಗುರುವಾಕ್ಯ ಪ್ರಮಾಣವಾಗಿ, ಸದ್ಭಕ್ತ ಮಹೇಶ್ವರರು ಪರರೆಂಜಲಸ್ತ್ರೀಯಳ ಭೋಗಿಸಿದಡೆ ಹಿಂದಣ ಭವಪಾಶ ಬೆನ್ನಬಿಡದುಯೆಂದು ದ್ವಿತೀಯ ಪಾತಕಂಗಳ ನಿರಸನಂಗೈದು, ತ್ರಿಕರಣಶುದ್ಧವಾಗಿ, ನಡೆದಂತೆ ನುಡಿದು, ನುಡಿದಂತೆ ನಡೆದು, ದೃಢಚಿತ್ತರಾಗಿ, ಜಾಗ್ರ ಜಾಗ್ರ ಇನ್ನು ತಿರುಗಿ ಭವಕ್ಕೆ ಬಂದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆಯೆಂದು ತ್ರಿವಿಧಬಿಂದುಗಳ ತಡೆದು, ಸಾಕ್ಷಿ: ಕಾಮಃ ಕ್ರೋಧಶ್ಚ ಲೋಭಶ್ಚ ದೇಹೇ ತಿಷ್ಠಂತಿ ತಸ್ಕರಾಃ | ಜ್ಞಾನರತ್ನಾಪಹಾರಾಯ ತಸ್ಮಾತತ್ತ್ವಂ ಜಾಗೃತೋ ಭವ ||'' ಎಂದರಿದು, ಅರುವಿನ ಮಹಾಜ್ಞಾನರತ್ನವ ಕಳೆದು, ಮತಿಭ್ರಷ್ಟ ಕ್ರಿಮಿಕೀಟ ಜನ್ಮಕ್ಕೆ ಬೀಳದಂತೆ ನಿಜೇಷ್ಟಲಿಂಗಾಂಗಸಮರತಿಯುಳ್ಳ ನಿಷ್ಟನಾಗಿ, ಪರರ ಸಂಗವ ಭವಸಂಗವೆಂದರಿದಾನಂದದಿಂದ ಸತ್ಯಶುದ್ಧನಾಗಿ, ಗುರುಹಿರಿಯರಿಗೆ ಖೊಟ್ಟಿಯಾಗದೆ, ಕಾಲಕಾಮರಟ್ಟುಳಿಯ ಕಾಡಾರಣ್ಯಕ್ಕೆ ಮಹಾಜ್ಞಾನವೆಂಬ ಕಿಚ್ಚನಿಕ್ಕಿ, ಚಿತ್ಪ್ರಭಾಬೆಳಗಿಂಗೆ ಮಹಾಬೆಳಗಾಗಿರ್ಪುದು ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.