Index   ವಚನ - 46    Search  
 
ಪರಶಿವತತ್ವಶರೀರಮಂ ಧರಿಸಿ, ಪರಿಪೂರ್ಣಜ್ಯೋತಿರ್ಮಯ ನಿಃಕಳಂಕ ಶ್ರೀಗುರುಲಿಂಗಜಂಗಮದ ನಿಜಪ್ರಸನ್ನಪ್ರಸಾದ ಪಾದೋದಕಪ್ರಣಮಪ್ರಸನ್ನತೆ ಪ್ರಸಾದ ಚಿದ್ಬೆಳಗಿನಿಂದ ಮನೆಗಟ್ಟಿ, ಅಂಗ ಪ್ರಾಣ ಮನ ಭಾವ ಕರಣಂಗಳ ವಿಷಯಾತುರವೆಂಬ ಪ್ರವೃತ್ತಿಜ್ಞಾನಮಂ ಮರೆದು ನಿವೃತ್ತಿಸುಜ್ಞಾನೋದಯರಾಗಿ, ಅಭಿರತಿಕ್ರೀಡಾವಿಲಾಸದೊಳ್ ಕೂಡೆರಡಳಿದ ಆದಿಲಿಂಗ ಅನಾದಿಶರಣನ ಪೂರ್ಣಾನಂದದ ಚಿದಾಬ್ಧಿಯಲ್ಲಿ ಲೋಲುಪ್ತರಾಗಿ, ಮಹಾಘನಕ್ಕೆ ಘನವೆನೆಸಿ ನಿಂದ ನಿತ್ಯಮುಕ್ತ ಭಕ್ತಗಣಾರಾಧ್ಯರು, ಬಾಹ್ಯಾಂತರಂಗದಲ್ಲಿ ಬಿಡುಗಡೆಯುಳ್ಳ ಪಂಚಸೂತಕಂಗಳ ನಿರಶನವಾವಾವೆಂದೊಡೆ: ಜನನಸೂತಕ ಜಾತಿಸೂತಕ ರಜಃಸೂತಕ ಉಚ್ಛಿಷ್ಟಸೂತಕ ಪ್ರೇತಸೂತಕವೆಂಬಿವಾದಿಯಾದ ಸರ್ವಸೂತಕಂಗಳು. ಅಂಗಲಿಂಗವೆ ಸದಾಚಾರವಾಗಿ, ಚಿದಂಗ ಚಿದ್ಘನಲಿಂಗವೆ ಪರಿಪೂರ್ಣ ಆಚರಣೆಯಾಗಿ, ಪರಿಪೂರ್ಣಾಂಗ ಪರಿಪೂರ್ಣಲಿಂಗವೆ ಸಚ್ಚಿದಾನಂದಸಂಬಂಧವಾಗಿ ಪರಿಶೋಭಿಸುವ ನಿಜೇಷ್ಟಲಿಂಗಶರಣರಿಗಿಲ್ಲ ನೋಡಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.