Index   ವಚನ - 52    Search  
 
ಪರತತ್ವಮೂರ್ತಿ ಅಷ್ಟಾವರಣಸ್ವರೂಪ ಶ್ರೀಗುರುಮಾರ್ಗಾಚಾರ್ಯ ಸದ್ಧರ್ಮೋದ್ಧಾರಕ ಭಕ್ತಗಣಾರಾಧ್ಯರು, ಹಿಂದೆ ಹೇಳಿದ ಪಂಚಸೂತಕಂಗಳ ಭವಮಾಟಕೂಟದ ಶೈವಶಾಸ್ತ್ರವಿಡಿದು, ಜ್ಯೋತಿಷ್ಯಕರ್ಮವ ಮಾಡಿ, ತನಗಾ ಪಂಚಾಂಗವೆ ತತ್ಪ್ರಾಣವಾಗಿ, ಸದಾಚಾರ ಸದ್ಭಕ್ತಮಹೇಶ್ವರರಿಗೆ ಹೇಳುವ ಕುಂಡಗೋಳಕರೆ ಪರಮಪಾತಕರು ನೋಡಾ. ಆ ಪರಮಪಾತಕರು ವರ್ತಿಸಿ ನಿಜಗೆಟ್ಟು ಸೂತಕವೆಂಬ ಪಾತಕಾಬ್ಧಿಯಲ್ಲಿ ಮುಳುಮುಳುಗೇಳುವ ಸೂತಕಗಳಾವಾವೆಂದಡೆ: ಪ್ರಥಮದಲ್ಲಿ ಜನನಸೂತಕನಿರಸನಮಂ ಪೇಳ್ವೆನು. ನಿರಂಜನ ನಿಃಶೂನ್ಯ ನಿಃಕಳಂಕ ಹರಗುರು ಲಿಂಗಜಂಗಮಭಕ್ತಮಹೇಶ್ವರರ ಕ್ರಿಯಾಶಕ್ತಿಯ ಹೃತ್ಕಮಲದಲ್ಲಿ ಉದಯವಾದ ಶಿಶುವು ಧರಣಿಯ ಮೇಲೆ ಪತನವಾದಾಗಳೆ ಶ್ರೀಗುರುವಿನ ಆಜ್ಞೋಪದೇಶದಿಂದ ಶಿವಮಂತ್ರವನ್ನುಚ್ಚರಿಸುತ್ತ, ಲಿಂಗಷಟ್ಸ್ಥಲವನು, ಲಿಂಗ ಛಿನ್ನಭಿನ್ನವನು, ಲಿಂಗಲಕ್ಷಣವನು ನೋಡಿ, ವಿಚಾರತ್ವದಿಂದ, ಪ್ರಥಮದಲ್ಲಿ ಆ ಲಿಂಗಾಂಗಕ್ಕೆ ಗೋಮೂತ್ರವ ತಳೆದು, ಆ ಲಿಂಗಾಂಗಸಂಬಂಧಸೂತ್ರದಿಂದಮಳ ಪಾದೋದಕದೊಳ್ ಸ್ನಾನಂಗೈದು ಶ್ರೀಗುರುಹಸ್ತದಿಂದ ವಿಭೂತಿಪಟ್ಟವಂ ಕಟ್ಟಿ, ಶಿವಪಂಚಾಕ್ಷರಮಂ ಲಿಖಿಸಿ, ಆ ಶಿಶುವಿನ ನಾಭಿನಾಳಂ ಕೊಯಿವುದೆ ಗಣಮಾರ್ಗವು. ಸಾಕ್ಷಿ: “ಲಿಂಗಾಂಕಿತಂ ತನುಪ್ರಾಣಂ ಲಿಂಗರೂಪೇಣ ರೂಪಿಣಃ| ಲಿಂಗಭಕ್ತಿಪರಜ್ಞಾನಂ ಪ್ರಾಣಲಿಂಗೀತಿ ಕಥ್ಯತೇ||” ಎಂದುದಾಗಿ, ಇಂತು ಗುರುಮುಟ್ಟಿ ಪೂರ್ವಲಿಖಿತವ ತೊಡೆದು, ವಿಭೂತಿಪಟ್ಟವಂ ಕಟ್ಟಿ, ಪಂಚಾಕ್ಷರ ಶಿವಲಿಖಿತಮಂ ಮಾಡಿ, ಆ ಭಕ್ತಶಿಶುವಿನ ಲಿಂಗಾಂಕತವ ಮಾಡದೆ ಶಿವಸೂತ್ರನಾಭಿನಾಳವ ಕೊಯ್ದರಾದಡೆ ಶಿವದ್ರೋಹಿಗಳೆನಿಸಿಕೊಂಡು ಶಿಕ್ಷೆಗೊಳಗಾಹರು. ಈ ಮಾರ್ಗವರಿದು ಲಿಂಗಾಂಕಿತವಾದ ಮೇಲೆ, ಆ ಲಿಂಗಶಿಶುವನೆತ್ತಿಕೊಂಬುದು. ಇಂತಲ್ಲದೆ, ಲಿಂಗಬಾಹ್ಯರಸಂಗಡ ಜನನಕೃತ್ಯವ ಮಾಡಿಸಿ, ಹುರಿಯ ಕೊಯಿಸಿ, ಎಣ್ಣೆ ಬೆಣ್ಣೆಗಳ ಹಚ್ಚಿ, ನೀನರೆರೆದುಕೊಂಡು, ಆ ಭವಿಸಂಸರ್ಗಲಿಂಗಾಂಕಿತಹೀನವಾದ ಶಿಶುವ, ಭಕ್ತಮಹೇಶ್ವರರ ಕ್ರಿಯಾಂಗನೆಯರೆತ್ತಿ, ಅಮೃತಗುಟುಕಕೊಟ್ಟರೆ ರೌರವನರಕ ಪಿತ-ಮಾತೆ-ಸುತರಿಗೆಂದುದು ಹರವಾಕ್ಯವು. ಅದೆಂತೆಂದೊಡೆ: ಸಾಕ್ಷಿ: “ಲಿಂಗಾಂಗಸಂಗಸಂಗಿನಾಂ ಲಿಂಗಬಾಹ್ಯಸತೀಸುತಾಃ| ಆಲೀಂಗಚುಂಬನಾಚ್ಛೈವ ರೌರವಂ ನರಕಂ ವ್ರಜೇತ್||” ಎಂದುದಾಗಿ, ಲಿಂಗಬಾಹ್ಯರ ಲಿಂಗಸಮರಸವನುಳಿದು ಭವಿ ಮಾಟಕೂಟವ ತಿರಸ್ಕರಿಸಿ, ಶ್ರೀಗುರುಕಾರುಣ್ಯದಿಂದ ಲಿಂಗ ಆಯತ ಸ್ವಾಯತ ಸನ್ನಿಹಿತವೆಂಬ ಭಾವವ ಸತಿ-ಪತಿ-ಭಕ್ತ-ಮಹೇಶ-ಗಣಾರಾಧ್ಯರಿಗೆ ಸನ್ಮತವಾಗಿ, ನಿರ್ಧಾರವಾದ ಬಳಿಕ ಲಿಂಗಾಂಗಸಂಬಂಧಿಗಳಿಂದ ನಿಮಿಷಾರ್ಧವಗಲದಂಥಾ ಲಿಂಗಧಾರಣ ಲಿಂಗಾರ್ಚನಾರ್ಪಣಸ್ಥಲವನರಿದು, ಲಿಂಗಸ್ಪರಿಶನದಿಂದ ಚರಪಾದೋದಕ ಲಿಂಗೋದಕಗಳಲ್ಲಿ ಜಳಕವ ಮಾಡಿಸಿ, ಚರಲಿಂಗಸ್ಪರಿಶನಭೂತಿಯಂ ಮಂತ್ರಸ್ಮರಣೆಯಿಂದ ಧಾರಣಂಗೈದು ಸಕಲಕ್ರಿಯೆಗಳಿಗೆ ಲಿಂಗಭಸಿಮಂತ್ರವೆ ಮುಂತಾಗಿ ಚರಮೂರ್ತಿ ಚರಣಧೂಳನದಿಂದ ಪವಿತ್ರವಾದ ಲಿಂಗಪ್ರಸಾದದೆಣ್ಣೆ ಬೆಣ್ಣೆ ಮಧುರಸಾಮೃತವನೆರೆದು, ಘನಲಿಂಗಮೋಹದೊಳ್ ಅತಿ ಪ್ರೇಮದಿಂ ಸಾಕುವುದೆ ಭಕ್ತಮಹೇಶ್ವರರಿಗೆ ಹೊದ್ದಿತ್ತಿದ್ದಿತ್ತೆಂಬ ಭ್ರಾಂತುಭ್ರಮೆಗಳಿಲ್ಲದೆ ವಿರಾಜಿಸುವ ಭವಿಮಾಟಕೂಟವಿರಹಿತವಾದ ಲಿಂಗಾಚಾರಮಾರ್ಗವು. ಇಂತಪ್ಪ ಘನಲಿಂಗಾಚಾರದ ಹರಗುರುಮಾರ್ಗದ ಕ್ರಮಕಟ್ಟಳೆಯನರಿಯದೆ, ಭವಜೀವಿ ಭವಿಮಾನವರಂತೆ ಪುತ್ರೇಷಣದ ಭ್ರಾಂತಿಯೊಳ್ ಲಿಂಗಶಿಶುವಿಂಗೆ ಈರಲು, ಗಾಳಿಸೋಂಕು, ಮೂವಟ್ಟಲು, ದೃಷ್ಟಿಪತನ ಬಾಲಗ್ರಹ ಮೊದಲಾದ ನಾನಾ ಸಂಕಲ್ಪ ಸೂತಕ ಹೊಲೆಕರ್ಮವ ಮಾಡಬೇಕೆಂದು ಶಕುನಕಾಣಿಕೆಯರಂ ಕೇಳಿ, ಪಂಚಾಂಗದ ಜೋಯಿಸರಂ ಬೆಸಗೊಂಡು, ಅನಾಚಾರಕೃತ್ಯಗಳಿಂದ ಜನನಸೂತಕ ಭವಕರ್ಮಗಳ ಕಲ್ಪಿಸಿ, ಮಾಡುವ ಭಕ್ತ ಮಹೇಶಂಗೆ ಆಚಾರವಿಲ್ಲ, ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲ, ಪಾದೋದಕಪ್ರಸಾದವಿಲ್ಲ. ಅವರು ಭಕ್ತಮಹೇಶ್ವರರಲ್ಲ; ಅವರಿಗೆ ರೌರವನರಕ ತಪ್ಪದು. ಅದು ಎಂತೆಂದೊಡೆ-ಶಿವಾಗಮ ಸಾಕ್ಷಿ: “ಯದ್ಯಪಿ ಲಿಂಗದೇಹೀನಾಂ ಜಾತಕಾಲೇ ನ ಸೂತಕಃ| ಪ್ರಮಾದಾತ್ಕುರುತೇ ಯಸ್ತು ನರಕೇ ಕಾಲಮಕ್ಷಯಂ|| ತಿಥಿವಾರಂ ಚ ನ ಭೃತ್ಯಂ ನಕ್ಷತ್ರಾಣಿ ಗಣಯೇತ್| ಶ್ರಾವಯಂ ತಿಥಿವಾರಂ ಚ ತದ್ಭಕ್ತಃ ನರಕಂ ವ್ರಜೇತ್||” ಎಂದುದಾಗಿ, ನಿಜವೀರಶೈವಸಂಪನ್ನರೆನಿಸಿ, ಈ ಹೆತ್ತ ಹೊಲೆಕರ್ಮವ ಮಾಡುವರು ಭಕ್ತಮಹೇಶ್ವರರಲ್ಲ. ಆ ಭವಿಕರ್ಮಿಗಳ ಗೃಹದಲ್ಲಿ ಹೊಕ್ಕು ಲಿಂಗಾರ್ಚನಾರ್ಪಣಗಳ ಮಾಡುವಾತ ಜಂಗಮಸ್ಥಲಕ್ಕೆ ಸಲ್ಲ. ಈ ಮೂವರಿಗೆ ಸಾಕಾರಸೃಷ್ಟಿಯುಳ್ಳನ್ನಕ್ಕರ ಗುರುಮಾರ್ಗಾಚಾರದ ಪ್ರಮಥಗಣ ಪರಶಿವತತ್ವಪದ ದೊರಕೊಳ್ಳದು ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.