Index   ವಚನ - 53    Search  
 
ಕರ್ಮಭೂಭಾರಿಗಳಾದಂಥ ಭವಿಶೈವರು ವರ್ತಿಸುವಂಥ ಜಾತಿಸೂತಕನಿರಸನದ ವಚನಸೂತ್ರವದೆಂತೆಂದೊಡೆ; ಜಡಶೈವಕರ್ಮಜಾತವ ಕಳೆದು ಪರಾತ್ಪರ ಪರಮಾಣು ಪರನಾದಬಿಂದುಕಳಾಚರಿತ್ರ ಮೂರ್ತಿ ಶ್ರೀಗುರುಲಿಂಗದೇವರು ಜಡಜೀವಭಾವವನಳಿದು ಶಿವಭಾವ ಮಾಡಿದ ಕಾರಣಿಕರಾದ ಪುಣ್ಯಸ್ವರೂಪರೊಳ್ ನಿಃಕಳಂಕ ಪರಶಿವಕುಲವಲ್ಲದೆ ಅನ್ಯಥಾ ಕುಲವುಂಟೆ ಸದ್ಭಕ್ತಶರಣರಿಗೆ? ಆವಾಶ್ರಮದಲ್ಲಿ ಅವತರಿಸಿದರೇನು? ಪರಿಪೂರ್ಣಮಹಾಜ್ಞಾನವೆಂಬ ಜ್ಯೋತಿರ್ಮಯ ಮಹಾಘನ ಪ್ರಸನ್ನತಿಪ್ರಸನ್ನದಿಂದ ಅಂಗ ಮನ ಪ್ರಾಣ ಭಾವೇಂದ್ರಿಕರಣಗಳೊಳು ಚಿದ್ಘನ ಲಿಂಗಾಯತ ಸ್ವಾಯತ ಸನ್ನಿಹಿತ ಪರಮಾರಾಧ್ಯ ಚರಪಾದತೀರ್ಥಪ್ರಸಾದ ಮಂತ್ರವಾದ ಶರಣರಲ್ಲಿ ಜಾತ್ಯಾಶ್ರಮಕುಲವನರಸುವರೆ? ಅಯೋನಿಜ ಅಜಡಸ್ವರೂಪಗಣಸಭೆಯಲ್ಲಿ ಸರ್ವಾಚಾರಸಂಪತ್ತಿನ ಸತ್ಕ್ರಿಯಾಜ್ಞಾನಾನುಭಾವದ ಸತ್ಯಶುದ್ಧ ನಡೆನುಡಿನರಸಬೇಕಲ್ಲದೆ, ಮಾನವರಂತೆ ಮನಷ್ಯರೆಂದು ಭಾವಿಸಲಾಗದು ಸದ್ಭಕ್ತ ಮಹೇಶ ಪ್ರಮಥಗಣಾರಾಧ್ಯರು. ಇದಕ್ಕೆ ಹರವಾಕ್ಯ ಪ್ರಮಾಣು ಅದೆಂತೆಂದೊಡೆ-ಸಾಕ್ಷಿ: “ಗ್ರಾಮೀಣಮಲಿನಂ ತೋಯಂ ಯಥಾ ಗಚ್ಛತಿ ಸಾಗರಂ| ಶಿವಸಂಸ್ಕಾರಸಂಪನ್ನೇ ಜಾತಿಭೇದಂ ಕಾರಯೇತ್|| ಯಥಾ ಪಂಕೇ ಸರೋಜಸ್ಯ ಯಥಾ ಕಾಷ್ಠೇ ಹುತಾಶನಃ| ಯಥಾ ಪಾಷಾಣೇ ಸುವರ್ಣಂ ಭಕ್ತಶ್ಚಾಂಡಾಲವಂಶಜಾಃ|| ಯಥಾ ಕ್ಷೀರಂ ತಥಾ ಘೃತಂ ಯಥಾ ತಿಲಂ ತಥಾ ತೈಲಂ| ಯಥಾ ಪುಷ್ಪಮ್ ತಥಾ ಗಂಧಃ ಯಥಾ ಜಾತಸ್ತಥಾ ಗುಣಃ||” ಎಂದುದಾಗಿ, ಘನಲಿಂಗಾಂಗಸಂಗಸಮರತಿಯೋಗಾನುಸಂಧಾನ ನಡೆನುಡಿಯುಳ್ಳ ಸದ್ಭಕ್ತಗಣಾರಾಧ್ಯಯರಲ್ಲಿ ಜಾತ್ಯಾಶ್ರಮ ಕುಲಗೋತ್ರವನರಸಲಾಗದು. ಜ್ಯೋತಿರ್ಮಯ ಪರಶಿವಸ್ವರೂಪ ಗುರುಲಿಂಗಜಂಗಮಸಂಬಂಧವನುಳ್ಳ ಸದ್ಭಕ್ತಗಣಂಗಳ ಕೇವಲ ನಿಃಕಲಪರಶಿವಜಾತರು. ಚಿದ್ಘನಲಿಂಗಪ್ರತಿಬಿಂಬರು, ಅಯೋನಿಸಂಭವರು, ಅಜಾತಚರಿತ್ರರು, ನಿತ್ಯನಿರ್ಮಲರು ನಿರ್ದೋಷಿಗಳು ನಿಃಕಾಮಿಗಳುಕ ನಿಃಕ್ರೋದಿಗಳು ನಿರ್ಲೋಭಿಗಳು ನಿರ್ಮೋಹಿಗಳು ನಿರ್ಮದರು ನಿರ್ಮಚ್ಚರರು ನಿರೂಪಾಧಿಕರು ನಿಃಕಳಂಕರು ನಿರೋಗಿಗಳು ನಿತ್ಯ ಶಿವಾನಂದ ಕಲ್ಯಾಣರು ನಿತ್ಯ ಶಿವಯೋಗಸಂಪನ್ನರು ನಿತ್ಯ ದಾಸೋಹ ಪರಮಾನಂದತೃಪ್ತರು, ಸತ್ತುಚಿತ್ತಾನಂದ ನಿತ್ಯಪರಿಪೂರ್ಣ ಅವಿರಳಪರಂಜ್ಯೋತಿಸ್ವರೂಪ ಸುಗುಣ ನಿರ್ಗುಣ ನಿಜಾನಂದಲೋಲುಪ್ತರು, ಅಂಗದಾಚಾರಕ್ಕೆ ಆಯತವ ಮಾಡಿದವರು, ಪ್ರಾಣಷಟ್ ಸ್ಥಲಕ್ಕೆ ಸ್ವಾಯತವೆಂದೆನಿಸಿದವರು, ಭಾವದಷ್ಟಾವರಣಕ್ಕೆ ದಾಸನೆಂದೆನಿಸಿದವರು, ಕರಣೇಂದ್ರಿಯಗಳ ಸತ್ಕ್ರಿಯ ಸಮ್ಯಜ್ಞಾನ ಜಪತಪೋಪದೇಶದಲ್ಲಿ ಪರಮಾನಂದಭರಿತರು, ಚಿದ್ಬೆಳಗಿನ ಚಿದ್ಬ್ರಹ್ಮದ ಬೆಳಗಿನಲ್ಲಿ ಘನಮನವೇದ್ಯರು, ವಾಣಿನಾಲ್ಕರಡಿಮೆಟ್ಟಿನಿಂದ ನಿರ್ವಾಣಪದಪ್ರದಾಯಕರು. ನಿಜಮುಕ್ತಿಸ್ವರೂಪ ನಿರವಯ ಸಮಾಧ್ಯಸ್ತರುಮಪ್ಪ ಶಿವವಂಶೋದ್ಧಾರಕ ಸದ್ಭಕ್ತಗಣಂಗಳಿಗೆ ಪೂರ್ವಜಾತವ ಕಲ್ಪಿಸಿ ಅವರ ಗೃಹಂಗಳ ವಿಡಂಬಿಸಿ, ಭೌತಿಕಜಡಾನ್ನ ನೀರಿನ ಶೀಲವ ಹಿಡಿದು, ಪರದೈವದ ಪೂಜೆ, ಪರಸ್ತ್ರೀಯರ ಗಮನ, ಪರದ್ರವ್ಯಾಪಹಾರ, ನಿಂದೆ ವಂದನೆ ಪರಜೀವಹಿಂಸೆಯನೆಸಗಿ, ಗುರುಲಿಂಗಜಂಗಮದ ದೀಕ್ಷೋಪದೇಶವನರಿಯದೆ ಸತ್ಕ್ರಿಯಾಜ್ಞಾನ ಬಾಹ್ಯರಾಗಿ, ವಿಷಯಾತುರದಿಂದ ವರ್ತಿಸುವಂಥ ಭವಭಾರಿಗಳ ಪಿತ-ಮಾತೆ ಗುರು-ಹಿರಿಯರು ಸತಿ-ಸುತರು ಬಂಧು-ಬಳಗ ಹೆಣ್ಣು-ಗಂಡಿನ ನೆಂಟರೆಂದು ಒಡಗೂಡಿ ಶಿವಾಚಾರಸಂಪನ್ನರೆಂದು ನುಡಿಗಡಣದಿಂದ ಕುಲಜಾತಿ ಆಶ್ರಮಕ್ಕೆ ಚಲಗತರಾಗಿರ್ಪುದೆ ದ್ವಿತೀಯ ಸೂತಕ ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.