Index   ವಚನ - 68    Search  
 
ಲೋಕಾರ್ಥದ ಸತಿಪುರುಷರ ಯೋಗ್ಯ ಅಯೋಗ್ಯದ ತೆರನಂತೆ, ಮಹದರುವೆಂಬ ಶ್ರೀಗುರುಪ್ರಸನ್ನನಾಗಿ, ಲಿಂಗದಲ್ಲಿ ದೃಷ್ಟಿನಟ್ಟು ಗುರುಕರುಣವ ಪಡೆದು, ನಿಜಮುಕ್ತನಾಗಬೇಕೆಂಬ ಮಹಾಜ್ಞಾತಲೆದೋರುವ ಪರಿಯಂತರವು, ಸತಿಪುರುಷರಿಗೆ ಬಾಲತ್ವದಲ್ಲಿ ಗುರುವಿತ್ತ ಲಿಂಗ ಛಿನ್ನಭಿನ್ನವಾದರೆ ಆ ಲಿಂಗವ ತೆಗೆದು ಗುರುವಿಗೊಪ್ಪಿಸಿದಲ್ಲಿ, ಆ ಗುರುದೇವನು ಸೂತ್ರವ ಹರಿಯದೆ ಮುಂದೆ ಸುಯಿಧಾನದಾಜ್ಞೆಯ ಮಾಡಿ, ಬಂಧುರವೆನಿಸಿ, ಇಪ್ಪತ್ತೊಂದುಪೂಜೆಯ ಮಾಡದೆ, ಭಂಡಾರದ ಸೇವಕರಿಂದ ಗೋಮೂತ್ರ ಮೊದಲಾದ ಸಮ್ಮಾರ್ಜನೆ, ಗೋಕ್ಷೀರ ಮೊದಲಾದ ಪಂಚಾಮೃತ ಧೂಳಪಾದೋದಕದಿಂದ ಮತ್ತೊಂದು ಲಿಂಗವ ತೊಳೆದು ಐದುಪೂಜೆಯೆನಿಸಿ ಪ್ರಸಾದವ ಕೊಡದೆ, ತೀರ್ಥವೊಂದನೆ ಅರ್ಪಿಸಿ ಮೊದಲು ಸುಯಿಧಾನವ ತಪ್ಪಿದ ಲಿಂಗವ ಯಾರಾನಾ ಭಕ್ತಗಣಂಗಳು ಲಿಂಗೈಕ್ಯವಾದಾಗ್ಗೆ ಪ್ರಸಾದ ಪ್ರತಿಪುಷ್ಪದಲ್ಲಿ ಸಮಾಧಿಯೊಳಗೆ ನಿಕ್ಷೇಪವೆನಿಸುವುದು ಸಾಮಾನ್ಯವು. ಇದು ಎಲ್ಲಿ ಪರಿಯಂತರವೆಂದಡೆ: ಆ ಶ್ರೀಗುರುಕರುಣದಿಂದೆ ಭಕ್ತಗಣಸಾಕ್ಷಿಯಾಗಿ, ಇಪ್ಪತ್ತೊಂದು ಪೂಜೆಗಳೊಳು ಅಂಗವೆ ಸತಿ ಲಿಂಗವೆ ಪತಿಯೆಂದು ಕಂಕಣವ ಕಟ್ಟಿ ಪರಿಯಂತರವು, ಎಷ್ಟು ವೇಳೆ ಸುಯಿಧಾನ ತಪ್ಪಿದರೂ ದೀಕ್ಷಾಗುರುಸ್ಥಲಕ್ಕೆ ಸೇರೋತನಕ ಲಿಂಗಧಾರಣವ ಮಾಡುವುದು, ಶಂಕಿಸಲಾಗದು. ಗುರುಕರುಣದಿಂದ ಇಪ್ಪತ್ತೊಂದು ಪೂಜೆಯಮಾಡಿ, ಶುದ್ಧಸಿದ್ಧಪ್ರಸಾದಿಯಾಗಿ, ಶಿವಮಂತ್ರಜಪವ ಮಾಡುವುದು. ಚಿದ್ಘನಲಿಂಗಾಂಗವರಿದು, ಸತ್ಕ್ರಿಯೆ ಸಮ್ಯಜ್ಞಾನಾಚರಣೆಯಿಂದ ನಡೆನುಡಿಗಳಿಂ ಪ್ರಮಥಗಣವೊಪ್ಪಿ, ಪ್ರಸಿದ್ಧಪಾದೋದಕ, ಪ್ರಸಿದ್ಧಪ್ರಸಾದವ ಕೊಂಡು, ಪ್ರಸಾದಿಯೆನಿಸಿದ ಮೇಲೆ ಗುರುವಿತ್ತ ಲಿಂಗ ಭಿನ್ನ ಛಿನ್ನವಾದೊಡೆ ವಿಯೋಗವಾದೊಡೆ ಸರ್ವಾಚಾರ ಭಕ್ತ ಮಹೇಶ ಪ್ರಸಾದಿ ಪ್ರಾಣಲಿಂಗಿ ಶರಣಲಿಂಗೈಕ್ಯಸ್ಥಲದವರು, ಲಿಂಗಬಾಹ್ಯರು ಪ್ರಸಾದಬಾಹ್ಯರು ಆಚಾರಬಾಹ್ಯರು ಮೊದಲಾದವರ ಸಮ್ಮುಖದಲ್ಲಿ ಲಿಂಗಾರ್ಚನಾರ್ಪಣಗಳ ಮಾಡಲಾಗದು. ಅದೇನು ಕಾರಣವೆಂದಡೆ, ಶಿವಾಗಮಸಾಕ್ಷಿ: ``ಅರ್ಚನಾದಿ ಕ್ರಿಯಾಕಾಲೇ ಪ್ರಚ್ಛನ್ನಂ ಪಟಮುತ್ತವಂ | ಪಾಪೀ ಕೋಪೀ ಪರಿಭ್ರಷ್ಟಃ ದುರ್ಮುಖಶ್ಚಾಪ್ಯ ದೀಕ್ಷಿತಃ || ಪ್ರಮಾದಾದ್ಧರ್ಶನಂ ಚೈವ ಪೂಜಾಕ್ರಿಯಾರ್ಪಣಂ ತಥಾ | ತಥಾಪಿ ನಿಷ್ಫಲಂ ಚೇತಿ ನರಕೇ ಕಾಲಮಕ್ಷಯಂ ||'' ಎಂದುದಾಗಿ, ಹರಗುರುವಾಕ್ಯವ ಮೀರಿ ಮಾಡಿದೊಡೆ, ಅವರಂತೆ ಕ್ರಿಯಾಬಾಹ್ಯರಪ್ಪುದು ತಪ್ಪದು ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.