Index   ವಚನ - 69    Search  
 
ಅನಾದಿ ಹರಗಣಮಾರ್ಗದ ಪ್ರಾಣಲಿಂಗಾಚಾರರ ನಡೆನುಡಿ ಏಕವಾದ ಚಿದ್ಬೆಳಗೆ ಅಂತರಂಗವಾಗಿ, ಪರೋಪಕಾರನಿಮಿತ್ಯರ್ಥವಾಗಿ ಅದೇ ಅಂತರಂಗಸಂಬಂಧವಾದ ನಿಜಚಿತ್ಕಳೆಯ ಪ್ರಭಾವಿಸಿ, ಮಹದರುವೆಂಬ ಪರಮಗುರುವೆಂಬ ಮಾರ್ಗದ ಇಷ್ಟಲಿಂಗಾಚಾರ ನಡೆನುಡಿ ಒಂದೊಡಲಾದ ಚಿದ್ಬೆಳಗೆ ಬಾಹ್ಯರಂಗವಾಗಿ, ಉಭಯ ಸಂಬಂಧದಾಚರಣೆಗಳಿಂದ ಅಣುಮಾತ್ರ ಹೋದಲ್ಲದೆ ಬಾಹ್ಯದಲ್ಲಿ ಸತ್ಕ್ರಿಯಾವರ್ತಕ, ಅಂತರಂಗದಲ್ಲಿ ಸಮ್ಯಜ್ಞಾನವರ್ತಕದಿರವಿನ ಮೂಲಾಧಾರ ಭಾವಲಿಂಗವೆಂಬ ನಿಜಶರಣಜಂಗಮದೇವನ ಚಿದಂಗ ಚಿದ್ಘನಲಿಂಗದ ಅಖಂಡ ಜ್ಯೋತಿರ್ಮಯಗೋಳಕದ ಕೊನೆಮೊನೆಯೊಳಗೆ ನೆಲಸಿರ್ಪ ಸತ್ತುಚಿತ್ತಾನಂದ ಪರಬ್ರಹ್ಮದಿರವಿನ, ಕ್ರಿಯಾಮಂಡಲ ಸುಜ್ಞಾನಮಂಡಲ ಮಹಾಜ್ಞಾನಮಂಡಲವೆಂಬ ಷಟ್ ಪ್ರಕಾರದ ಮನೆಯೊಳ್ ತನ್ನ ತಾನು ಚುಂಬಿಸಿದಾನಂದದಿರವಿನ ಬೆಳಗ ಕಂಡು, ಕಣ್ಮುಚ್ಚಿ, ಮನ ಮೈಮರೆದು, ಬಚ್ಚಬರಿಯಾನಂದವಾಗಿ, ತಮ್ಮ ತಾವರಿದು, ಸುಸಂಗಸಂಗಿಗಳಾಗಿ, ನಿಜಮೋಕ್ಷದ ಖಣಿಯೆಂಬ ಮುಕ್ತಿಮಂದಿರವ ಹೊಕ್ಕು ಹೊರಡದ ಭಾವಭರಿತರೆ ನಿಮ್ಮ ಪ್ರತಿಬಿಂಬರು ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.