Index   ವಚನ - 70    Search  
 
ನಿಜಮೋಕ್ಷಮಂದಿರವ ಸೇರಿ ನಿಂದ ನಿತ್ಯಾನಂದಭರಿತರು, ಉರಿಯುಂಡಕರ್ಪುರದಂತೆ, ಚಿದ್ಘನಲಿಂಗ ಶರಣರೆ ತಾವಾಗಿ, ಹಿಂದಮುಂದಣ ಭವಾರಣ್ಯದ ಹಡಿಕೆ ಹಾದಿಯ ಸಂಭ್ರಮ ಸುಖ-ದುಃಖ, ಪುಣ್ಯ-ಪಾಪ, ಸ್ತುತಿ-ನಿಂದೆ, ಇಹ-ಪರವೆಂಬುಭಯ ದುರಿತಕರ್ಮಕೃತ್ಯಮಂ ನೆರೆ ನೀಗಿ, ನಿರವಯಬ್ರಹ್ಮವ ಹೊಂದಿ, ಒಂದೊಡಲಾಗಬೇಕಾದರೆ, ತನುಭೋಗಭ್ರಾಂತು ಮನಭೋಗಭ್ರಾಂತು ಜೀವಭೋಗಭ್ರಾಂತುವಿನ ಭವಿಮಾಟಕೂಟದ ವಿಷಯವ್ಯಾಪಾರಮಂ ಕಡಿದು ಖಂಡ್ರಿಸಿ, ಜಾಗ್ರ ಸ್ವಪ್ನ ಸುಷುಪ್ತಿಗಳಲ್ಲಿ ಶೂನ್ಯಲಿಂಗಾಂಗಸಂಗಯೋಗ ಸಮರತಿಯ ಕೂಟವಚ್ಚೊತ್ತಿ ಭಾವಭರಿತವಾಗಿ ಪರಮಹಂಸನೋಪಾದಿಯಲ್ಲಿ ಅಯೋಗ್ಯದ ಅನಾರ್ಪಿತಗಳಳಿದುಳಿದು, ಗುಪ್ತಪಾತಕಗಳ ನೆರೆ ನೀಗಿ, ಚಿದ್ಘನಲಿಂಗ ಭಕ್ತಜಂಗಮ ಗುರುಶಿಷ್ಯಸಂಬಂಧಮಂ ಹರಗುರುವಾಕ್ಯಂಗಳೊಳು ಸಲುವಷ್ಟು ಸತ್ಕ್ರಿಯೆ ಸಮ್ಯಜ್ಞಾನಾಚಾರ ನಡೆನುಡಿಗಳ ಸಾಧಿಸುವರೆ ಪ್ರಸನ್ನಪ್ರಮಥಗಣಮಾರ್ಗದವರೆಂದು, ತನುಮುಟ್ಟಿ, ಮನಮುಟ್ಟಿ, ಭಾವಭರಿತವಾಗಿ, ಪರಮಾನಂದಸುಖದಸುಗ್ಗಿಯೊಳು ಪರಿಪೂರ್ಣಮೋಹಾನಂದ ಕರುಣರಸ ತುಂಬಿ ತುಳುಕಾಡುತ್ತ, ಲೋಲಾಬ್ಧಿ ದರುಶನ ಸ್ಪರಿಶನ ಸಂಭಾಷಣೆ ಪಾದಾಂಬುಶೇಷ ಪ್ರಸಾದಕ್ಕೆ ಚೈತನ್ಯ ಚಿದ್ವಿಭೂತಿ ರುದ್ರಾಕ್ಷಿ ಮಂತ್ರಾನಂದದ ನಿಜಕೂಟಾನುಭಾವ ಪರಿಣಾಮವ ಕೊಟ್ಟು ಕೊಂಬೆನೆಂಬುದೆ ಎನ್ನ ರಮಣನೊಪ್ಪಿ ಸನ್ಮತವಾದ ಸತ್ಯಶುದ್ಧ ಯತಾರ್ಥ ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.