Index   ವಚನ - 71    Search  
 
ಅನಾದಿ ಪೂರ್ವಪುರಾತನ ಗಣನಾಯಕ ಹಿರಿದಂಡನಾಥನ ಘನಭಕ್ತಿ ದಾಸೋಹಂಭಾವನೊಲ್ಲೆನೊಲ್ಲೆ, ಬೇಕು ಬೇಕು,ಅದೇನು ಕಾರಣವೆಂದಡೆ: ಅಯೋಗ್ಯ ರೂಪು, ಅಕ್ರಿಯೆ, ಅಜ್ಞಾನ ಅನಾಚಾರಗಳ ಕಂಡು ಕಣ್ಣಮುಚ್ಚಿ ಮಹಾಬೆಳಗಿನ ಷಟ್ ಸ್ಥಲದ ಮಾರ್ಗವ ಸೇರದೆ, ಲಿಂಗಲಾಂಛನ ಶರಣೆಂದು ತನುಮನಧನವನರ್ಪಿಸಿದ ಪರಿಪೂರ್ಣಗುಪ್ತಭಕ್ತಿ ಎನ್ನಂತರಂಗನಾಥ ಪ್ರಾಣಲಿಂಗಕ್ಕೆ ಅರ್ಪಿತ, ಎನ್ನ ಬಹಿರಂಗದನಾಥ ಇಷ್ಟಲಿಂಗಕ್ಕೆ ಅನಾರ್ಪಿತ ನಿಜಮೋಕ್ಷಸ್ವರೂಪರ ಮಹಾಬೆಳಗಿನ ನಿಜಭಕ್ತಿಜ್ಞಾನವೈರಾಗ್ಯಾಚಾರ ಕ್ರಿಯಾನುಭಾವವೆಂಬ ಚಿದ್ಬಿಂದುವ ಬಿತ್ತಿ ಬೆಳೆಮಾಡಿ, ಭವಸಮುದ್ರಕ್ಕೆ ಹಡಗವ ಹಾಕಿ ದಾಂಟಿ, ನಿಜದುನ್ಮನಿಯ ಸೇರಿ, ನಿಂದ ಹಲಾಯುಧನಂಬಿಗರ ಚೌಡಯ್ಯನ ಘನಭಕ್ತಿದಾಸೋಹಂಭಾವ ಬೇಕು ಬೇಕು. ಅದೇನುಕಾರಣವೆಂದಡೆ: ಘನಕ್ಕೆ ಘನಯೋಗ್ಯ ಸದ್ರೂಪು ಸತ್ಕ್ರಿಯಾ ಸಮ್ಯಜ್ಞಾನ, ಸದಾಚಾರಗಳ ಕಂಡು ಕಣ್ದೆರೆದು ತನು ಉಬ್ಬಿ, ಮನ ಉಬ್ಬಿ, ಭಾವಭರಿಯನಾಗಿ, ನಿಜೋಲ್ಲಾಸದಿಂದ ಸರ್ವಾಚಾರ ಷಡುಸ್ಥಲಸಂಪತ್ತಿನ ನಿಜಾನುಭಾವ ನಡೆನುಡಿ ದೃಢಚಿತ್ತ ಚಿದ್ಘನಲಿಂಗಲಾಂಛನಕ್ಕೆ ಶರಣು ಶರಣಾರ್ಥಿಯೆಂದು ಸರ್ವಾಂಗಪ್ರಣುತರಾಗಿ, ನಿರ್ವಂಚಕತ್ವದಿಂದ, ಮಹಿಮಾಪದಭಕ್ತಿಯನುಳಿದು, ಅರ್ಥಪ್ರಾಣಾಭಿಮಾನ ಸಮರ್ಪಿಸಿದ ಪರಿಪೂರ್ಣರಹಸ್ಯತ್ವ ಕ್ರಿಯಾಶಕ್ತಿ, ಎನ್ನಂತರಂಗದೊಡೆಯ ಪ್ರಾಣಲಿಂಗನಾಥ, ಎನ್ನ ಬಹಿರಂಗದೊಡೆಯ ಇಷ್ಟಲಿಂಗನಾಥ, ಸಾಕಾರ ನಿರಾಕಾರದಾಚರಣೆಯ ಸಂಬಂಧ ಸತ್ಕ್ರಿಯೆ ಸಮ್ಯಜ್ಞಾನ ಸಾಕ್ಷಿಯಾಗಿ, ಅರ್ಪಿತವೆ ಪ್ರಭಾವಿಸಿ, ಸಂದುಸಂಶಯವಿಲ್ಲದೆ ಹೊರೆಯೇರಿ ಸರ್ವಾಂಗ ಉಕ್ಕಿ, ಕುಂದುಕೊರತೆ ನಿಂದ್ಯಾದಿಗಳಿಗಳುಕದೆ, ಅನಾಚಾರಕ್ಕೊಯಿರಿಯಾದ ಎನ್ನ ಗುರುಕರುಣ ವೀರಮಾಹೇಶ್ವರಾಚಾರಕ್ಕೆ ಮೋಹಿಸಿ ತಲೆಬಾಗಿದ ನಿಜಭಕ್ತಿ ಎನ್ನದೆಂಬೆ ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.