Index   ವಚನ - 72    Search  
 
ದೀಕ್ಷಾತ್ರಯಂಗಳಿಗೆ ಕಾರಣಕರ್ತನಾದ ಘನಗುರುವಾಗಲಿ, ಗುರುಭಕ್ತಿಯುಳ್ಳ ಶಿಷ್ಯನಾಗಲಿ, ಅರ್ಚನತ್ರಯಂಗಳಿಗೆ ಕಾರಣಕರ್ತ ಘನಲಿಂಗಪತಿಯಾಗಲಿ, ಲಿಂಗಪತಿಯ ಭಕ್ತಿಯುಳ್ಳ ಶರಣಸತಿಯಾಗಲಿ, ಅರ್ಪಣತ್ರಯಕ್ಕೆ ಕಾರಣಕರ್ತನಾದ ಷಟ್ಸ್ಥಲಾನುಭಾವನಾಯಕ ಘನಜಂಗಮನಾಗಲಿ, ಆ ಘನಗುರುಲಿಂಗಜಂಗಮಕ್ಕೆ ನಿರ್ವಂಚಕಭಕ್ತನಾಗಲಿ, ಪರತತ್ವಾನುಭಾವಕ್ಕೆ ಅನರ್ಪಿತವಾದ ಅನಾಚಾರಕ್ರಿಯೆ, ಅಜ್ಞಾನ ಅಸತ್ಯಕಾಯಕ ಅಯೋಗ್ಯಪಾತಕ ಸೂತಕ ನಡೆನುಡಿಗಳಿದ್ದರೆ, ಒಳಹೊರಗೆನ್ನದೆ ಬೆಳಗುವ ಘನಲಿಂಗಮಂತ್ರಸಾಕ್ಷಿಯಾಗಿ, ತ್ರಿಕರಣಾರ್ಪಣಗಳೊಳು ಘನಪಾದತೀರ್ಥಪ್ರಸಾದತ್ರಯಂಗಳ ಸಮರಸಭೋಜನವ ಮಾಡಲೊಲ್ಲೆ, ಅವರ ಕೂಡಲೊಲ್ಲೆ, ಅವರ ದಯಾನಂದ ಕರುಣವ ಬೇಡಲೊಲ್ಲೆ. ಅವರ ದರುಶನ ಸ್ಪರಿಶನ ಸಂಭಾಷಣೆಗಳ ಕೊಡಕೊಳ್ಳೆನೆಂಬುದೆ ಸತ್ಯಂ ಸತ್ಯಂ ನಿತ್ಯಂ ನಿತ್ಯಂ ಯತಾರ್ಥಂ ಎಂದು ನಿಜಮೋಕ್ಷಸ್ವರೂಪ ಪರಮಾರಾಧ್ಯ ಪರಮಾನುಭಾವನಾಯಕ ಎನ್ನ ನಿಜಮಹದರುವೆಂಬ ಗುರುಮಾರ್ಗ ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.