Index   ವಚನ - 93    Search  
 
ನಿಜವೀರಶೈವಾಚಾರ ಭಕ್ತಿ ವಿರಕ್ತಿ ಜ್ಞಾನಾನುಭಾವ ನಿಜವೈರಾಗ್ಯ ಷಡುಸ್ಥಲಮಾರ್ಗೋದ್ಧಾರಕ ಶ್ರೀಗುರುಸೂತ್ರ ದೀಕ್ಷೋಪದೇಶ ಸತ್ಯಶುದ್ಧ ನಡೆನುಡಿ ದೃಢಚಿತ್ತಿನ ಚಿದಾಂಶಿಕರಪ್ಪ ಸದ್ಭಕ್ತ ವಿರಕ್ತ ನಿತ್ಯಮುಕ್ತ ಸಾಧ್ಯಗಣಾರಾಧ್ಯರು ತಮ್ಮರಿವ ತಾವರಿದು, ಹಿಂದುಮುಂದಣ ಪುಣ್ಯಪಾಪವ ಮರೆದು, ಯೋಗ್ಯ-ಅಯೋಗ್ಯ, ಅರ್ಪಿತ-ಅನರ್ಪಿತ ಮಾರ್ಗಕ್ರಿಯಾಚರಣೆಸಂಬಂಧದ ಪೂರ್ವಪುರಾತನರೋಕ್ತಿಯಂ ಕರತಳಾಮಳಕವಾಗಿ ಸಾವಧಾನವೆಂಬ ಅತಿಜಾಗ್ರದಿಂದ ತ್ರಿವಿಧಜಪ ಪಂಚಜಪ ಷಡ್ವಿಧಜಪ ಏಕಜಪ ಅಗಣಿತ ಅಪ್ರಮಾಣಜಪವೆಂಬ ಶರಣನ ಚಿದ್ವಿಲಾಸದ ಮಹಾಬೆಳಗಿನ ಪ್ರಭೆ ಕೊನೆಯ ಮೊನೆಯೊಳಗೆ ನಿಂದು ಚಿದ್ವಿಭೂತಿ ರುದ್ರಾಕ್ಷಮಾಲಾಲಂಕೃತರಾಗಿ ಮೂಲಚಿದ್ಬಿಂದು ಚಿತ್ಪ್ರಸಾದಾಮೃತ ಪಾದೋದಕ ಪ್ರಸಾದಮಂ ಮತ್ತಾ ಮೂಲಚಿದ್ಬಿಂದು ಚಿತ್ಪ್ರಸಾದಾಮೃತಸ್ವರೂಪ ಘನಮಹಾಲಿಂಗಪತಿ ಶರಣನಂಗಸತಿ ಪತಿವ್ರತಭಾವದಿಂದ ಮೂಲಮೂರ್ತಿ ಚಿತ್ಪಾದೋದಕ ಪ್ರಸಾದ ಪ್ರಣಮದೇವನಾದ ನಿಜಜಂಗಮನಾಥಂಗೆ ಸಮರ್ಪಿಸಿ, ಸಾವಯ ನಿರವಯ ನಿರಂಜನ ಜಂಗಮಾರೋಗಣೆಯಿಂದ, ಭಕ್ತ ಮುಕ್ತ ವಿರಕ್ತರೆಂಬ ತ್ರಿವಿಧಗಣಾರಾಧ್ಯರು ಹರಹರ ಈ ಗುರುಕರುಣದಿಂದ ಬಹುತಪಸಿನಫಲ ಒದಗಿ ಚಿದಾವರಣ ಚಿದ್ಘನಲಿಂಗಾಂಗಸಂಗವಾದ ತ್ರಿಕೂಟಮಂ ಅರಿದು, ಅಚ್ಚೊತ್ತಿ, ತ್ರಿವಿಧಾನುಭಾವದಿಂದ ತ್ರಿವಿಧ ಚಿತ್ಪಾದೋದಕ ಪ್ರಸಾದ ಪ್ರಣಮವ, ಮತ್ತಾ ಚಿತ್ಪಾದೋದಕ ಪ್ರಸಾದ ಪ್ರಣಮಕ್ಕೆ ತೃಪ್ತಿಯನೈದಿಸಿ, ಭಕ್ತವಿರಕ್ತಮುಕ್ತರಾಚರಿಸುವ ಪರಿಯೆಂತೆಂದೊಡೆ: ಭಕ್ತನ ಭಕ್ತಿ ವಿರಕ್ತನಲ್ಲಿ, ವಿರಕ್ತನ ಭಕ್ತಿ ಭಕ್ತನಲ್ಲಿ ಸಮರಸೈಕ್ಯವಾದುವೆ ಆಚರಣೆಯಾಗಿ, ಇವರಿಬ್ಬರ ಭಕ್ತಿರತಿ ಮುಕ್ತಿಕಾಂತನಾದ ನಿಜಸಂಗಸಂಯೋಗ ಚಿದ್ಘನಲಿಂಗದಲ್ಲಿ ಸಮರಸೈಕ್ಯವಾದುದೆ ಸಂಬಂಧವಾಗಿ, ನಿಲುಕಡೆಯ ತಿಳಿದು ಭಕ್ತವಿರಕ್ತರಿಬ್ಬರು ಕೂಡಿದಂಥ ಸ್ಥಾನದಲ್ಲಿ ಮೂಲಮೂರ್ತಿಯಲ್ಲಿ ದೃಷ್ಟಿನಟ್ಟು, ಪರಿಣಾಮತರವಾದ ಶಿವತತ್ವೋದಕವನ್ನು ಶೋಧಕತ್ವದಿಂದ ಕಠಿಣಮಂ ಕಳೆದುಳಿದು, ಅನಾದಿ ನೆನಹಿಂದೆ ಪಾದಾಭ್ಯಂಗನದಿಂದ ತೊಳೆದಂಥಮಳ ಪಾದೋದಕವನ್ನು ಶಿವತತ್ವ ಲಿಂಗತತ್ವ, ಆ ಲಿಂಗತತ್ವ ಸಂಬಂಧವಾದ ಪೃಥ್ವಿಜಲಾಗ್ನಿ ಪದಾರ್ಥದ ಪೂರ್ವಾಶ್ರಯವ ಕಳೆದು, ಪರಶಿವತತ್ವ ಪದಾರ್ಥಕ್ಕೆ ದ್ರವ್ಯಾರ್ಪಣಕ್ಕೆ ಯೋಗ್ಯವೆನಿಸಿ, ತನ್ನ ಷಟ್ಪ್ರಣಮ ಸ್ವರೂಪವಾದ ಹಸ್ತದಿಂದ ಷಟ್ಪ್ರಣಮಸ್ವರೂಪವಾದ ಪಾದದಡಿಮುಡಿಗಳ ನಾಲ್ಕು ನಾಲ್ಕು ವೇಳೆ ಉಭಯಪಾದವನ್ನು ಸ್ಪರಿಶನಂಗೈದು, ಭಕ್ತವಿರಕ್ತಗಣಸಮುದಾಯವೆಲ್ಲ ಮುಖಮಜ್ಜನ ಸ್ನಾನ ಪಾಕಪಚನಾದಿಗಳನಾಚರಿಸಿ, ಲಿಂಗಬಾಹ್ಯರಿಗೆ ಹಾಕದೆ, ಸುಯ್ದಾನದಿಂದ ಗುರುಪಾದೋದಕದಲ್ಲಿ ಗುರುಭಕ್ತರಾಗಿ, ಲಿಂಗಪಾದೋದಕದಲ್ಲಿ ಲಿಂಗಭಕ್ತರಾಗಿ, ಜಂಗಮಪಾದೋದಕದಲ್ಲಿ, ಜಂಗಮಭಕ್ತರಾಗಿ, ಈ ತ್ರಿವಿಧೋದಕದಲ್ಲಿ, ಒಂದೊಂದರಲ್ಲಿ ಒಂಬತ್ತು, ಒಂಬತ್ತು ಒಂಬತ್ತು ಅರಿದು ಆಚರಿಸಿದಲ್ಲಿ ಮೂವತ್ತಾರಾಗುವದು, ಮತ್ತೆ ಒಂದೊಂದರೊಳಗೆ ಹತ್ತುತರದ ಪಾದೋದಕದಲ್ಲಿ ಮಿಶ್ರಮಿಶ್ರಂಗಳಿಂದ ಮಹಾಜ್ಞಾನಾಚರಣೆಯಲ್ಲಿ ನೂರು ತೆರನಾಗಿ, ಮಹಾಬಯಲಾಗಿ ತೋರಿತ್ತು ನೋಡಾ. ಮತ್ತಂ, ಹಸ್ತಸ್ಪರಿಶನವಾದ ಗುರುಪ್ರಸಾದ ಲಿಂಗಾರ್ಪಣ, ಲಿಂಗಪ್ರಸಾದ ಜಿಹ್ವಾರ್ಪಣ, ಜಂಗಮಪ್ರಸಾದವೆ ಸಹತ್ರಿವಿಧಾರ್ಪಣವಾದಲ್ಲಿ ಪರಿಪೂರ್ಣಪ್ರಸಾದವಾಗಿರ್ಪುದು. ಆ ಪ್ರಸಾದವೆ ಹನ್ನೊಂದುತೆರನಾಗಿರ್ಪುದು. ಆ ಹನ್ನೊಂದು ನೂರಾಯಿಪ್ಪತ್ತೊಂದು ತೆರನಾಗಿ ಬಯಲಿಂಗೆ ಮಹಾಬಯಲಾಗಿರ್ಪುದು ನೋಡಾ. ಈ ವಿವರವ ಜಂಗಮವರಿದಾನಂದಿಸಿ, ಭಕ್ತಂಗೆ ತೋರಿ, ಮುಕ್ತನೆನಿಸಿ, ಉಭಯವಳಿದೊಂದಾಗಿ, ಮಹವ ಸಾಧಿಸಬಲ್ಲವರೆ ನಿನ್ನ ಪ್ರತಿಬಿಂಬರು ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.