ಅಂಡಜ ಇಪ್ಪತ್ತೊಂದು ಲಕ್ಷ, ಪಿಂಡಜ ಇಪ್ಪತ್ತೊಂದು ಲಕ್ಷ,
ಉದ್ಬಿಜ ಇಪ್ಪತ್ತೊಂದು ಲಕ್ಷ, ಜರಾಯುಜ ಇಪ್ಪತ್ತೊಂದು ಲಕ್ಷ,
ಇಂತು ಎಂಬತ್ತುನಾಲ್ಕುಲಕ್ಷ ಜೀವರಾಶಿಗಳೊಳಗೆ
ಒಂದೊಂದು ಜನ್ಮದೊಳಗೆ ಸಹಸ್ರ ಸಹಸ್ರವೇಳೆ ಹುಟ್ಟಿಬಂದ
ಅನೇಕ ದುಃಖವಂತಿರಲಿ.
ಮುಂದೆ ಮನುಷ್ಯದೇಹವಿಡಿದು
ಬಂದ ದುಃಖಮಂ ಪೇಳ್ವೆನದೆಂತೆನೆ:
ತಂದೆಯ ವಿಕಾರದ ದೆಸೆಯಿಂದೆ
ಬಂದು ಬಿಂದುರೂಪಾಗಿ,
ತಾಯಿಯ ಬಸುರಲ್ಲಿ ನಿಂದು
ಒಂಬತ್ತು ತಿಂಗಳ ಪರಿಯಂತರ
ಅವಯವಂಗಳು ಬಲಿದು ಪಿಂಡವರ್ಧನವಾಗಿ,
ಕದ್ದ ಕಳ್ಳನ ಹೆಡಗೈಯ ಕಟ್ಟಿ ಸೆರೆಮನೆಯಲ್ಲಿ ಕುಳ್ಳಿರಿಸುವಂತೆ,
ಗರ್ಭವೆಂಬ ಸೆರೆಮನೆಯಲ್ಲಿ ಶಿಶುವು
ಮುಚ್ಚಿದ ಕಣ್ಣು, ಮುಗಿದ ಬಾಯಾಗಿ,
ಕುಕ್ಕುಟಾಸನದಲ್ಲಿ ಕುಳ್ಳಿರ್ದು,
ಕಡಿವ ಜಂತುಜಂಗುಳಿಯ ಬಾಧೆ,
ಸುಡುವ ಜಠರಾಗ್ನಿಯ ಬಾಧೆ,
ಎಡದಲ್ಲಿ ಮೂತ್ರದ ತಡಿಕೆಯ ಬಾಧೆ,
ಬಲದಲ್ಲಿ ಅಮೇಧ್ಯದ ಹಡಿಕೆಯ ಬಾಧೆ,
ಇಂತಿವು ಮೊದಲಾದನಂತಕೋಟಿ ಬಾಧೆಗಳಿಂದೆ
ದಿನದಿನಕ್ಕೆ ದುಃಖಮಂಬಡುತಿರ್ದು,
ಆ ಮೇಲೆ ಜಾತಿಸ್ಮರತ್ವ ಉದಯವಾಗಿ,
ತನ್ನ ಹಿಂದಣ ಧರ್ಮಕರ್ಮಂಗಳ ಪುಣ್ಯಪಾಪಂಗಳ
ಅರಹು ಮರಹುಗಳನಾರೈದು ನೋಡಿ,
ಹಿಂದರಿಯದ ಪಾಪದ ದೆಸೆಯಿಂದೆ ಈ ಗರ್ಭನರಕಕ್ಕೆ ಬಂದೆ,
ಇನ್ನು ಮುಂದೆ ತೆರನೇನೆಂದು ತನ್ನೊಳಗೆ ತಾನೆ ಚಿಂತಿಸಿ
ಸರ್ವರಿಗೆ ಪರಮೇಶ್ವರನೇ ಕರ್ತನು,
ಸರ್ವರ ಭವಪಾಶಂಗಳ ಛೇದಿಸುವಾತನು ಪರಮೇಶ್ವರನೆಂದರಿದು,
ಮನದಲ್ಲಿ ನಿಶ್ಚೈಸಿಕೊಂಡು ಆ ಪರಮೇಶ್ವರಂಗೆ ಶಿವಧೋ ಶಿವಧೋ
ಎಂದು ಮೊರೆಯಿಡುತ್ತ ಶಿವಧ್ಯಾನಮಂ ಮಾಳ್ಪ ಸಮಯದಲ್ಲಿ
ಕೋಟಿಸಿಡಿಲು ಹೊಯ್ದಂತೆ ವಿಷ್ಣುಪ್ರಸೂತಿಯೆಂಬ ಗಾಳಿ ಬೀಸಲು,
ಅದಕಂಡು ಥರಥರನೆ ನಡುಗಿ ಧ್ಯಾನಪಲ್ಲಟವಾಗಿ
ದಿಗ್‍ಭ್ರಮಣೆಗೊಂಡು ಊರ್ಧ್ವಮುಖವಾಗಿ ಕುಳಿತಿರ್ದ ಶಿಶುವು
ಗಿರ್ರನೆ ತಿರುಗಿ ತಲೆಕೆಳಗಾಗಿ
ಕರ್ತಾರನ ಕಂಬೆಚ್ಚಿನಲ್ಲಿ ಚಿನ್ನದ ಸಲಾಕೆ ತೆಗವಂತೆ,
ಬಚ್ಚಲಹುಳುವಿನಂದದಿ ಯೋನಿಯೆಂಬ
ಸೂಕ್ಷ್ಮ ದ್ವಾರದಿಂದೆ ಪೊರಮಟ್ಟು ಹುಟ್ಟಿದಲ್ಲಿ
ಕೋಟಿಬಾಧೆಗಳಿಂದ ನೊಂದು ಹವ್ವನೆ ಹಾರಿ
ಕಡುದುಃಖಮಂಬಟ್ಟು
ಪಿಂದಣ ಜಾತಿಸ್ಮರತ್ವ ಕೆಟ್ಟು, ಮತಿ ಮಸುಳಿಸಿ,
ತನ್ನ ಮಲಮೂತ್ರಂಗಳಲ್ಲಿ ತಾ ಹೊರಳಾಡಿ
ಬಾಲಲೀಲೆಯ ಸುಖದುಃಖಂಗಳನನುಭವಿಸಿ,
ಆ ಬಾಲಲೀಲೆಯು ಹಿಂದುಳಿದ
ಮೇಲೆ ಯೌವನದ ವಯಸ್ಸೊದಗಿದಲ್ಲಿ,
ಕಾಮದಲ್ಲಿ ಕರಗಿ ಕ್ರೋಧದಲ್ಲಿ ಕೊರಗಿ
ಮದಮತ್ಸರಂಗಳಲ್ಲಿ ಮುಂದುಗೆಟ್ಟು
ನಾನಾ ವ್ಯಾಪಾರವನಂಗೀಕರಿಸಿ
ಬಂದ ಯೋನಿಯೆಂದರಿಯದೆ, ಉಂಡ ಮೊಲೆಯೆಂದರಿಯದೆ,
ಕಾಮವಿಕಾರ ತಲೆಗೇರಿ ವಿಷಯಾತುರನಾಗಿ,
ಈಳಿಗಾರನ ದೆಸೆಯಿಂದ ಈಚಲಮರ ನಿಸ್ಸಾರವಾದಂತೆ,
ಸ್ತ್ರೀಯರ ಸಂಗದಿಂದೆ ದೇಹದೊಳಗಣ ಊರ್ಧ್ವಬಿಂದು
ಜಾರಿ ಜಾರಿ ಇಳಿದು ಸೋರಿ ಸೋರಿ
ಹೋಗಿ ದೇಹವು ನಿಸ್ಸಾರವಾಗಿ,
ಯೌವನದ ಬಲಗೆಟ್ಟು ಮುಪ್ಪಾವರಿಸಿ ಅಚೇತನಗೊಂಡು
ಸರ್ವಾಂಗವೆಲ್ಲ ನೆರೆತೆರೆಗಳಿಂದ ಮುಸುಕಲ್ಪಟ್ಟಾತನಾಗಿ,
ಆಧಿ ವ್ಯಾಧಿ ವಿಪತ್ತು ರೋಗ ರುಜೆಗಳಿಂದೆ ಬಹು ದುಃಖಬಟ್ಟು,
ಎದೆ ಗೂಡುಗಟ್ಟಿ, ಬೆನ್ನು ಬಾಗಿ, ಕಣ್ಣು ಒಳನಟ್ಟು,
ಶರೀರ ಎಳತಾಟಗೊಂಡು, ಕಾಲಮೇಲೆ ಕೈಯನೂರಿ
ಕೋಲವಿಡಿದು ಏಳುತ್ತ, ನಾನಾ ತೆರದ ದುಃಖಧಾವತಿಯಿಂದೆ
ಆತ್ಮ ಕೆಟ್ಟು ನಷ್ಟವಾಗಿ ಹೋಯಿತ್ತು ನೋಡಾ.
ಇದ ಕಂಡು ನಾನಂಜಿ ಮರಳಿ ಜನ್ಮಕ್ಕೆ ಬರಲಾರದೆ
ನಿಮ್ಮ ಮೊರೆಹೊಕ್ಕೆನಯ್ಯಾ ಅಖಂಡೇಶ್ವರಾ.
Art
Manuscript
Music
Courtesy:
Transliteration
Kaḍuduḥkhamambaṭṭu
pindaṇa jātismaratva keṭṭu, mati masuḷisi,
tanna malamūtraṅgaḷalli tā horaḷāḍi
bālalīleya sukhaduḥkhaṅgaḷananubhavisi,
ā bālalīleyu hinduḷida
mēle yauvanada vayas'sodagidalli,
kāmadalli karagi krōdhadalli koragi
madamatsaraṅgaḷalli mundugeṭṭu
nānā vyāpāravanaṅgīkarisi
banda yōniyendariyade, uṇḍa moleyendariyade,
kāmavikāra talegēri viṣayāturanāgi,
īḷigārana deseyinda īcalamara nis'sāravādante,
strīyara saṅgadinde dēhadoḷagaṇa ūrdhvabindu
jāri jāri iḷidu sōri sōri
hōgi dēhavu nis'sāravāgi,
Yauvanada balageṭṭu muppāvarisi acētanagoṇḍu
sarvāṅgavella nereteregaḷinda musukalpaṭṭātanāgi,
ādhi vyādhi vipattu rōga rujegaḷinde bahu duḥkhabaṭṭu,
ede gūḍugaṭṭi, bennu bāgi, kaṇṇu oḷanaṭṭu,
śarīra eḷatāṭagoṇḍu, kālamēle kaiyanūri
kōlaviḍidu ēḷutta, nānā terada duḥkhadhāvatiyinde
ātma keṭṭu naṣṭavāgi hōyittu nōḍā.
Ida kaṇḍu nānan̄ji maraḷi janmakke baralārade
nim'ma morehokkenayyā akhaṇḍēśvarā.