Index   ವಚನ - 61    Search  
 
ಸಕಲೇಂದ್ರಿಯಂಗಳ ಪ್ರಪಂಚು ನಾಸ್ತಿಯಾಗಿರಬಲ್ಲಡೆ ಕಕ್ಷದಲ್ಲಿ ಧರಿಸುವುದಯ್ಯಾ ಶಿವಲಿಂಗವ. ಕಾಂಚನಕ್ಕೆ ಕೈಯಾನದಿರ್ದಡೆ ಕರಸ್ಥಲದಲ್ಲಿ ಧರಿಸುವುದಯ್ಯ ಶಿವಲಿಂಗವ. ಪರಸ್ತ್ರೀಯರ ಅಪ್ಪುಗೆ ಇಲ್ಲದಿರ್ದಡೆ ಉರಸ್ಥಲದಲ್ಲಿ ಧರಿಸುವುದಯ್ಯ ಶಿವಲಿಂಗವ. ಎಂದೆಂದೂ ಹುಸಿಯನಾಡದಿರ್ದಡೆ ಜಿಹ್ವಾಪೀಠದಲ್ಲಿ ಧರಿಸುವುದಯ್ಯ ಶಿವಲಿಂಗವ. ಅನ್ನಪಾನಂಗಳಿಗೆ ಬಾಯ್ದೆರೆಯದಿರ್ದಡೆ ಅಮಳೋಕ್ಯದಲ್ಲಿ ಧರಿಸುವುದಯ್ಯ ಶಿವಲಿಂಗವ. ಅನ್ಯರಾಜರಿಗೆ ತಲೆವಾಗದಿರ್ದಡೆ ಉತ್ತಮಾಂಗದಲ್ಲಿ ಧರಿಸುವುದಯ್ಯ ಶಿವಲಿಂಗವ. ಇಂತೀ ಷಡ್‍ವಿಧಾಚಾರ ನೆಲೆಗೊಂಡು ಷಡ್‍ವಿಧ ಸ್ಥಾನದಲ್ಲಿ ಶಿವಲಿಂಗವ ಧರಿಸಬಲ್ಲಡೆ, ಭಕ್ತನೆಂಬೆನು, ಮಹೇಶ್ವರನೆಂಬೆನು, ಪ್ರಸಾದಿಯೆಂಬೆನು, ಪ್ರಾಣಲಿಂಗಿಯೆಂಬೆನು, ಶರಣನೆಂಬೆನು, ಐಕ್ಯನೆಂಬೆನು. ಇಂತೀ ಭೇದವನರಿಯದೆ ಲಿಂಗವ ಧರಿಸಿದಡೆ ಮಡಿಲಲ್ಲಿ ಕಲ್ಲ ಕಟ್ಟಿಕೊಂಡು ಕಡಲ ಬಿದ್ದಂತಾಯಿತ್ತು ಕಾಣಾ ಅಖಂಡೇಶ್ವರಾ.