Index   ವಚನ - 126    Search  
 
ಅಂಜನಸಿದ್ಧಿಯ ಸಾಧಿಸುವ ಅಣ್ಣಗಳ ಕಣ್ಮನಕ್ಕೆ ಮಂಜುಗವಿಸಿ ಹೊರಗಾದನು ನೋಡಾ ಪರಶಿವನು. ಘುಟಿಕಾಸಿದ್ಧಿಯ ಸಾಧಿಸುವ ಅಣ್ಣಗಳ ಕಣ್ಮನಕ್ಕೆ ಸಟೆಯ ತೋರಿಸಿ ಹೊರಗಾದನು ನೋಡಾ ಪರಶಿವನು. ಯಂತ್ರ ಮಂತ್ರ ತಂತ್ರ ಸಿದ್ಧಿ ವಾದ ವಶ್ಯವ ಸಾಧಿಸುವ ಅಣ್ಣಗಳ ಕಣ್ಮನಕ್ಕೆ ಗಾಢ ಕತ್ತಲೆಗವಿಸಿ ಹೊರಗಾದನು ನೋಡಾ ಪರಶಿವನು. ಭಕ್ತಿಸಿದ್ಧಿಯ ಸಾಧಿಸುವ ಅಣ್ಣಗಳ ಮನಕ್ಕೆ ಮುಕ್ತಿಯ ಬೆಳಗನೇ ತೋರಿ ಒಳಗಾಗಿರ್ಪನು ನೋಡಾ ನಮ್ಮ ಅಖಂಡೇಶ್ವರನೆಂಬ ಪರಶಿವನು.